ಪುಟ:ಅರಮನೆ.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೮

ಅರಮನೆ


ನಡೆದಿರುವುದಲ್ಲಾ.. ಕುಂಪಣಿ ಸಯ್ನಿಕರು ಮಾರು ಯೇಸದಲ್ಲಿ ಸ್ರೋತ್ರುಗಳ
ನಡುವೆ ಅಲ್ಲಲ್ಲಿ ಅಡಗಿ ಕುಂತಿರುವರಲ್ಲಾ.. ತನ್ನ ಪ್ರಿಯಸಿಷ್ಯ ವರಹಾ ಯಂಕಟ
ಪತಿರಾಯನ ಮೊಮ್ಮಗನಾದ ನರಸಿಮ್ಮರಾಯನೇ ಯೀ ಸಂಚನ್ನು
ರೂಪಿಸಿರುವನಲ್ಲಾ... ತಾವು ರಚಿಸಿರುವುದೇ ಬ್ಯಾರೆ... ಯಲ್ಲಿ ಜರುಗಲಿರುವುದೇ
ಬ್ಯಾರೆ... ಯೀ ಅಧ್ಯಾಯವನ್ನು ಪುರಾಣ ಕತ್ರುವಾದ ತಾವು ಹೆಂಗಾದರೂ
ಮಾಡಿ ಬದಲಾಯಿಸಬೇಕು... ನಾಗಿರೆಡ್ಡಿಯನ್ನು ರಕ್ಷಿಸುವುದು ಪುರಾಣ ಧರುಮ
ಯಿರುವುದು.. ಯಂದು ಮುಂತಾಗಿ ಯೋಚಿಸಿದ ಶಾಸ್ತ್ರಿಗಳ ಆತಮವು ಆ
ಕೂಡಲೆ ಕಾರ್ಯ ಪ್ರವುರುತ್ತವಾಯಿತು. ತಾವೇ ಯೇದಿಕೆಗೆ ಧಾವಿಸಿ ಗವುಡನ
ಸರೀರವನ್ನು ಆಕ್ರಮಿಸಿಕೊಂಡುಬಿಟ್ಟಿತು..
ಪುರಾಣದ ಲಯದೊಳಗ ವರ್ತಮಾನ ನಿಚ್ಚಳವಾಗಿ ಕಾಣಿಸಿಕೊಂಡೊಡನೆ
ಭಕುತರು ಹ್ಹಾ ಹ್ಹಾ ಅಂತ ರೋಮಾಂಚನಗೊಂಡರು. ಜಯ ಹೋ
ಭೀಮಲಿಂಗೇಶ್ವರಾ.. ಯಂದು ಜಯಕಾರ ಹಾಕಿದರು. ರೆಡ್ಡಿಲೋರೆಡ್ಡಿರಾ
ಬೊಬ್ಬಿಲಿನಾಗಿರೆಡ್ಡಿರಾ ಯಂದೂ ಕೂಗಿದರು... ಯೇಳನೆ ಚರಣದ ಚರಿತ್ರೆಗೆ
ವರ್ತಮಾನದ ಭಾಷ್ಯ ಯೇನು ಮುಂದಕ ಬಂತೆಂದರೆ.. ಗೊನೆಗೊಂಡಲದ
ರಂಪಾಟ ಲಾಗಾಯ್ತು ಕಥೆವಳಗ ಮನ್ರೋನು ಬಂದ, ಹೆನ್ರಿಯೂ ಬಂದ..
ಸಂಚಿನ ರೂವಾರಿಯಾಗಿ ನರಸಿಮ್ಮರಾಯನೂ ಬಾರದೆ ಯಿರಲಿಲ್ಲ..
ಕುರೆಕುಂಪೆಯೂ ಬಂತು.. ಸಿವನಾಮಪಾರೊತೀಪತಿ ಹರ ಹರ ಮಾದೇವs..
ಕುಂಪಣಿ ಸರಕಾರದ ಸಯ್ನಿಕರು ಮಾರು ಯೇಸದಲ್ಲಿ ಅಡಗವರೆ ಯಂಬ
ಅಧಿಕ್ರುತ ಪ್ರಸ್ತಾಪ ಬಂದೊಡನೆ ಮುಂದಕ ಯೇನೇನು ಜರುಗಿತಂದರ..
ಅಗ......ಯಿಗss.. ತಗss...ಅಂತ ವಬ್ಬೊಬ್ಬ ಸಿಪಾಯಿಯನ ಹಿಡ ಹಿಡದು
ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟರು. “ಯಿನ್ನೊಂದ್ಸಲ ನಮ್ಮ ನಾಗಿರೆಡ್ಡಿಣ್ಣನ
ತಂಟೆಗೆ ಬಂದರೆ ನಿಮೆಂಡತಿ ರಂಡ್ಯಾಕಾಳ ಹುಷಾರು” ಯಂದು ಯಚ್ಚರಿಕೇನ
ನೀಡಿ ಹೆನ್ರಿಯನ್ನು ಬಿಡುಗಡೆ ಮಾಡಿದರೆಂಬಲ್ಲಿಗೆ ಸಿವಸಂಕರ ಮಾದೇವಾss..
ಅತ್ತ ಹರಪನಹಳ್ಳಿ ಪ್ರಾಂತದೊಳಗಿನ ವರ್ತಮಾನ
ಅಯೋಮಯವಾಗಿದುದರ ಬಗೆಗೆ ಹೇಳುತ್ತ ಹೋದರೆ.. ಸಿವ ಸಿವಾSS...
ಅತ್ತ ಕೂಡ್ಲಿಗಿ ಪಟ್ಟಣದೊಳಗೆ ಆದರ್ಸ ದಾಂಪತ್ಯದ ಹರಿಕಾರನಾದ
ಯಂಕೋಬರಾಯನ ತಲೆ ವಳಗ ತಾಯಕ್ಕ ಯಂಬ ವಂದು ತೊಲಿ ತೂಕದ
ಗುಂಗಾಡಿಯೂ, ಚಿನ್ನಾಸಾನಿಯಂಬ ನೂರು ತೋಲ ತೂಕದ ಗುಂಗಾಡಿಯೂ