ಪುಟ:ಅರಮನೆ.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೨

ಅರಮನೆ


ಸಬುಧವನ್ನು ಕೇಳಿಸಿಕೊಂಡವಳಾದ ತಾಯಕ್ಕ ತಲಬಾಕಲಿಗೋಡೋಡುತ
ಬಂದು “ಯೀ ಬಡವಿಯ ಮನೆ ಯೀಗಲಾದರೂ ಗ್ನಾಪಕಕ್ಕೆ ಬಂದಿತಲ್ಲ”
ಯಂದು ವುಸುರುಬಿಟ್ಟು ಸ್ವಾಗತಿಸಿದಳು. ವಾರೆಗಣ್ಣಿನಿಂದ ನೋಡಿದ. ವಯಸ್ಸು
ಯರಡು ಮೂರು ದಿನಗಳೊಳಗೆ ಯೇನಿಲ್ಲಾಂದರೂ ಅಯಿದತ್ತು ವರುಷ
ಕಡಿಮೆಗೊಂಡಿರುವಂತೆ ಯಿದ್ದಾಳೆ.. ದೇವರ ಮಾಯೆ.. ತಾನು ವುಚಿತಾಸನದಲ್ಲಿ
ಕೂತದ್ದಾಯಿತು. ಯಂದಿನಂತೆ ಕೇಸರಿ ಮಿಶ್ರಣ ಮಾಡಿದ ವುಗುರು ಬೆಚ್ಚಗಿನ
ಹಾಲನ್ನು ನಡುಗುವ ಕಯ್ಯಿಗಳಂದ ಕುಡಿದದ್ದಾಯಿತು. ಆಕೆಯ
ವಜ್ರದುಂಗುರಗಳಿಂದಲಂಕ್ರುತ ನೀಳ ಬೆರಳುಗಳ ತುದಿ ಸೋಂಕಿನ
ರೋಮಾಂಚನದಿಂದಾಗಿ ವಂದರಗಳಿಗೆ ಗದ್ಗದಿತಗೊಂಡನು. ರೇಚಕ, ಪೂರಕ,
ಕುಂಭಗಳಿಂದ ಸಾವರಿಸಿಕೊಂಡ ವಕ್ಷಸ್ಥಳದಲ್ಲಿ ಗೋಚರವಾಗುವುದೋ ಯಂಬ
ಅಂಜಿಕೆಯಿಂದ ಗೋರಿಂಟಾಕು ರೇಖಾ ಚಿತ್ರಗಳಿದ್ದ ಆಕೆಯ ಪಾದಗಳನ್ನೇ
ನೋಡುತ, ಆಯಾಚಿತವಾಗಿ ಮ್ಯಾಲಿನದೆಲ್ಲವನ್ನೂ ಕಲ್ಪಿಸಿಕೊಳ್ಳುತ್ತ.. ಅದರೊಟ್ಟಿಗೆ
ತವರೂರಲ್ಲಿರುವ ತನ್ನ ಪತಿವುರೊತಾ ಸಿರೋಮಣಿ ಪತ್ನಿಯನ್ನೂ ಗ್ನಾಪಕಕ್ಕೆ
ತಂದುಕೊಳ್ಳುತ, ತಾನು ಬಂದ ವುದ್ದೇಶವನ್ನು ನವುರಾದ ಮಾತುಗಳಲ್ಲಿ ತಿಳಿಸಿದ..
ಪಟ್ಟಣದಾದ್ಯಂತ ನಯನಾಜೂಕುಗಳಿಂದಲೂ, ಪ್ರಜಾವಾತ್ಸಲ್ಯದಿಂದಲೂ
ಪ್ರಸಿದ್ಧಳಾಗಿರುವ ಜೆನ್ನಿಫರಮ್ಮಳೇ ತಮ್ಮ ನಿರೀಕ್ಷೆಯಲ್ಲಿರುವಳೆಂದ ಮ್ಯಾಲ
ಹೊರಡದೆ ಯಿರಲಕಾದೀತೇ, ತನ್ನ ಮಗಳೊಡನೆ ತಾನೂ ಡೋಲಿಯಲ್ಲಿ
ಹೊರಡದೆ ಯಿರಲಕಾದೀತೇ, ಯರಡು ಮೂರು ಫರಲಾಂಗು ದೂರವನ್ನು
ಕ್ರಮಿಸಿ ಬಂಗಲೆಯನ್ನು ಫಲಾನ ಸಮಯಕ್ಕೆ ಸರಿಯಾಗಿ ತಲುಪುವುದಾಗಿ....
ಅತ್ತ ಕುದುರೆಡವು ಪಟ್ಟಣಕ್ಕಂಟಿಕೊಂಡಂತೆ ಜಾನುಮಲೆ ಯಂಬ ಹೆಸರಿನ
ಸಪೂರಾದ ಅಡವಿಯೊಂದು ಯಿತ್ತಷ್ಟೆ. ಮಾಸತಿ ಹೊನ್ನಮ್ಮ ಯುಂಜಲು ಮಾಡಿ
ಬಿಟ್ಟ ಮೊಲೆ ವುಂಡು ಬೆಳೆದಿದ್ದ ವಡ ಹುಟ್ಟಿದವರ ಪಯ್ಕಿ ಮೋರ್ವಳಾದ
ಕಡದಮ್ಮ ಜುಳು ಜುಳು ಯಂಬ ಲಯದೊಂದಿಗೆ ಆ ಅಡವಿಯೊಳಗೆ
ಹರಿಯುತಲಿದ್ದಳಷ್ಟೆ ಆಕೆಯ ಬಂಗಾರ ವರ್ಣದ ದಡದಿಂದೇರುತಾ ಯೇರುತಾ
ಜಾನುದಿಬ್ಬವನ್ನು ತಲುಪಿದ ತ್ರಿವಳಿ ಸೋದರರು ಯಾರು ಯಾರೆಂದರೆ ಗಾಳೆಯ್ಯ,
ಬೀಳಯ್ಯ, ಪಾಳಯ್ಯರು.. ವನುವಾಸಯ್ಯ ವುಪಾಸಯ್ಯರು ದನುರ್ವಿದ್ಯಯನ್ನು
ಯಲ್ಲಿ ಕಲಿತರೋ ಅದೇ ಗುರೀರಯ್ಯ ಯಂಬ ಕಲಿಯುಗದ ದ್ರೋಣಾಚಾರ್ಯನ
ಬಳಿ.. ಬಿಲ್ಲು ಅವರ ಮುಂಡ.. ಬಾಣ ಅವರ ರುಂಡ.. ಬೇಟೆಯೇ ಆ ಮುವ್ವರ