ಪುಟ:ಅರಮನೆ.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೨೩೭

ಅಂತರ್ದಾನವಾದದ್ದಾಯಿತು. ಸಾವಿರಾರು ಮಂದಿಯ ಕಣ್ಣುಗಳ ಗೂಡುಗಳಿಂದ
ನೋಟಗಳೆಂಬುವ ಗೀಜಗಗಳು ಪುರ್ರಂತ ಹಾರಿ ಬಂದು ಸಾರೋಟೊಳಗೆ
ರೋಮ ಯಂಬ ಮಾರುದ್ದಗಲದ ಹುತ್ತದೊಳಗ ಮಾಯಾದ ನಿದ್ದೆಗೆ
ಬಲಿಯಾಗಿದ್ದ ಹಂಪಜ್ಜನ ಮ್ಯಾಲ ಕೂಕಂಡವು. ಗೊಂಜಾಡರಲಡವಯ್ಯ
ಜಡೆತಾತಪ್ಪಂದಿರೇ ಮೊದಲಾದ ತ್ರಿಷಷ್ಟಿ ಪುರಾತನರ ಮುಖಂಡತ್ವ ವಹಿಸಿದ
ಕಾಡುಗೊಲ್ಲರೀರಯ್ಯನು ಮೆಲ್ಲಗೆ ಮುಂದ ಮುಂದಕ ಬಂದು ವಂದು ಕಾಲನ್ನು
ಯೇರು ಕೋಲ ಮ್ಯಾಲಿಟ್ಟು ಹತ್ತಿ ಸಿವಧನಸ್ಸಿನಂತೆ ಬಾಗಿ ರೋಮರಾಜಿಯನ್ನು
ಹಿಂದಕ್ಕೆ ಸರಿಸಿ ಹೊ ಹೋ ಅವನೇ ಯಿವನೆಂದು ಗುರುತಿಸಿ “ಹಂಪಜ್ಜಾss
ಅಣಾs... ಹಂಪಜ್ಜಾsss” ಯಂದು ಪಲುಕಿದ.. ಸತಮಾನ ಮೊತ್ತದ ನಿದ್ದೆಯನ್ನು
ವಂದೇ ಯೇಟಿಗೆ ಮಾಡುತಲಿದ್ದಾತನು ಕಣ್ಣು ಬಿಟ್ಟು ಕ್ರುಪಾದ್ರುಸ್ಟಿ ಬೀರಲಿಲ್ಲ..
ಭುಜ ಹಿಡಿದು ಆ ಮೇರೋ ಪರವತವನ್ನು ಮಿಸುಕಾಡಿಸಲು ಪ್ರಯತ್ನಿಸಿದ.
ಆದರವಯ್ಯನು ಯಚ್ಚರಾಗಲಿಲ್ಲ.. ಹ್ಹಾ... ಹ್ಹಾ.. ಯಾಕ ಯಚ್ಚರಾಗುತಾಯಿಲ್ಲ..
ಜನರು ಗೀಜಗಗಳನ್ನು ವುಪಸಮ್ಮರಿಕೊಂಡು ಕುಸುಮಾಸ್ತರಗಳನ್ನು ಕಣ್ಣಿಂದ
ಬಿಟ್ಟರು.. ಆದರೂ ಯಚ್ಚರಾಗಲಿಲ್ಲ.. ಬಿಸಿವುಸುರು ನಿಟ್ಟುಸಿರುಗಳ ಮಳೆಗರೆದರು..
ಆದರೂ ಯಚ್ಚರಾಗಲಿಲ್ಲ... ದಾರೀಲಿ ಬರುವಾಗ್ಗೆ, ಭೂತ ಪ್ರೇತ ಪಿಚಾಚಿ
ಬೆಂತರುಗಳ ಕೆಟ್ಟ ದುಸ್ಟಿ ತಾಕಿದ್ದೀರಭೌದೆಂದು ಭಾವಿಸಿ ನೀವಳಿಸಿ ತೆಗೆದರಾದರೂ,
ಚುಟುಗಿ ಹಾಕಿದರಾದರೂ ಯಚ್ಚರಾಗಲಿಲ್ಲ... ಕವಳೆಪ್ಪ ಕಿವಿಯೊಳಗ ಕಹಳೆಯಿಟ್ಟು
ಮೂದಿದರೂ, ದ್ಯಾವಮ್ಮ ಚವುಡಿಕೆ ಭಾರಿಸಿದರೂ ಆತ ಯಚ್ಚರಾಗಿ ಕಣ್ಣು
ಬಿಟ್ಟು ಪಿಳುಪಿಳಿ ನೋಡಲಿಲ್ಲ.. ಕಯ್ಗೆ ಬಂದ ತುತ್ತು ಬಾಯಿಗೆ ಯಟಕುವ
ಪರಿಯೆಂತು? ಆತ ಯಚ್ಚರಾಗುವ ಪರಿಯೆಂತು? ಆತನನ್ನು ಯಚ್ಚರಮಾಡುವ
ಪರಿಯೆಂತು? ತ್ರಿಲೋಕ ಸಂಚಾರ ಕಯ್ಕೊಂಡಿರಬೌದಾದ ಆತನ ಆತುಮವು
ಮತ್ತೆ ತನ್ನ ಕಾಯ ಯಂಬ ಕದಳಿಯನ್ನು ಸೇರುವಂತೆ ಮಾಡುವ ಪರಿಯಂತು?
“ನೋಡಿರಯ್ಯಾ ನೋಡಿರಿ ನರಹುಳುಗಳಾ, ಪುರಾತನರ ಪಯ್ಕಿ
ಪುರಾತನಾಗಿರುವ ಹಂಪಜ್ಜನನು.. ಕೇಳಿರಯ್ಯಾ ಕೇಳಿರಿ ನರಹುಳುಗಳಾ... ಹಂಪಜ್ಜ
ವುಸುರಾಡುವ ಪರಿಯ.. ಯೀವಯ್ಯನ ಮಯ್ಯೋಳಗ ಗವುರಸಂದ್ರಮಾರೆಮ್ಮ
ತಾಯಿ ವಸ್ತಿ ಮಾಡಿದಂಗವಳೆ.. ಮುಂದೆ ಜರುಗಲಿರುವ ಮಂಗಳ ಕಾರ್ಯೇವುಗಳು
ಸುಸೂತ್ರವಾಗಿ ನಡೆಸುವ ಸಲುವಾಗಿ, ತನ್ನ ಸಿಸುಮಗನನ್ನು ಅವಧೂತ
ಪಟ್ಟಕ್ಕೇರಿಸುವ ಸಲುವಾಗಿ, ತನ್ನ ಸಿಸುಮಗನ ಪಂಚೇಂದ್ರಿಯಂಗಳ ಮೂಲಕ