ಪುಟ:ಅರಮನೆ.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೮

ಅರಮನೆ


ನರ ಕೋಟಿಯ ಯಿದ್ಯಾಮಾನಂಗಳನ್ನು ಅರಿಯುವ ಸಲುವಾಗಿ, ಮತ್ತಿನ್ನೆಷ್ಟೋ
ಕಾರಣಗಳ ಸಲುವಾಗಿ ಯಿಸ್ರಾಂತಿ ಪಡೀತಿದ್ದಂಗವಳೆ.. ತನಗೆ ತಾನss
ಯಚ್ಚರಾಗುವ ಪರ್ಯಂತರ ಯಲ್ಡು ವುಸುರಾಡೋರು ವಂದು ವುಸುರಾಡಿರಿ..
ವಂದು ವುಸುರಾಡೋರು ಅರ್ದ ವುಸುರಾಡಿರಿ.. ಹುಷಾರ್...”
ಕಾಡುಗೊಲ್ಲರೀರಯ್ಯನ ಸರೀರವು ತನ್ನಟಗ ತಾನೆ ನುಡಿಯುತ್ತಲೆ ಮವುನ
ಸಾಮುರಾಜ್ಯದ ಸ್ಥಾಪನೆಗೊಂಡಿತು ಯಂಬಲ್ಲಿಗೆ ಸಿವಸಂಕರ ಮಾದೇವss..
****
ಅರಿಕೆ ಮಾಡೋದು ಮಾಡಿ ತನ್ನ ಜೀವಮಾನದಲ್ಲಿ ಮೊಟ್ಟಮೊದಲ
ಬಾರಿಗೆ ತಲೆಬಗ್ಗಿಸಿ ಕುಂಬಳಕಾಯಿ ನಿಮ್ದು, ಕುಡುಕೋಲು ನಿಮ್ದು... ಯೇನಾರರ
ಮಾಡಿಕೊಳ್ಳಿ ಯಂಬಂತೆ ನಿಂತಿದ್ದ ಹೆನ್ನಿಯತ್ತ ತೀಕ್ಷದ್ರುಸ್ಟಿ ಬೀರಿದ ಥಾಮಸು
ಮನ್ರೋ ಸಾಹೇಬನು 'ಆಲ್ ರಯ್ದು' ಅಂದನು. ಅವನು ಹೇಳಿದ್ದರಲ್ಲಿ
ಯಿಚಿತ್ರಸತ್ಯಾಂಸವು ಅಡಗಿದಂಗಿರುವುದು.. ಬೊಬ್ಬಿಲಿನಾಗಿರೆಡ್ಡಿ ತಾನು
ದಯವಾಂಸ ಸಂಭೂತನೆಂಬುದನ್ನೂ, ತಾನು ಅಜೇಯನೆಂಬುದನ್ನೂ ಪವಾಡ
ಸದ್ರುಸ ರೂಪದಲ್ಲಿ ಸಾಬೀತು ಮಾಡಿರುವನು. ತನ್ಮೂಲಕ ತನ್ನ
ಜನಪ್ರಿಯತೆಯನ್ನು ನೂರ್ಮಡಿಗೊಳಿಸಿಕೊಂಡಿರುವನು. ಬಿರುಗಾಳಿ ಸದ್ರುಸದ
ಅವನನ್ನು ಹಿಡಿಯುವುದು ಹೇಗೆಂಬುದರ ಬಗ್ಗೆ ಮನ್ರೋ ತನ್ನ ಹತ್ತಾರುಮಂದಿ
ಅಧಿಕಾರಿಗಳೊಡನೆ ಚಿಂತನ-ಮಂಥನ ನಡೆಸಿದನು. ಅವನ ಬಗ್ಗೆ ಅನುಕಂಪ
ಹೊಂದಿದವರನ್ನು, ಅವನ ಹಿತಯ್ಷಿಗಳನ್ನು ನೂರಾರು ಸಂಖ್ಯೆಯಲ್ಲಿ
ಬೇಟೆಯಾಡಿದಲ್ಲಿ ರೆಡ್ಡಿಯು ಸರಣಾಗತನಾಗಭೌದೆಂದು ಅಧಿಕಾರಿಗಳು
ವುಂಡಾಗುತ್ತಿಗೆ ಅಭಿಪ್ರಾಯವನ್ನು ಯಕ್ತಪಡಿಸಿದರು. ಮನ್ರೋಗೆ ಸಿಟ್ಟು
ಬಾರದಿರಲಿಲ್ಲ ಅವರ ಅಗ್ನಾನ ಕಂಡು.. ಸಮಸ್ತ ಯಿಂಡಿಯಾವನ್ನು ಕುಂಪಣಿ
ಸರಕಾರ ಜಯಿಸಿರುವುದೆಂದು ಭಾವಿಸಿರುವ ಯಿವರನ್ನು ಸ್ಕವಂಡರಲ್ಲು.. ಯಂದು
ಬಯ್ಯುವುದೋ, ರ್ಯಸ್ಕಲ್ಲು ಯಂದು ಬಯ್ಯುವುದೋ ಅಥವಾ ಯೂಜ್ಲೇಸ್
ಪೆಲೋಸೂ ಯಂದಾರ ಬಯ್ಯುವುದೋ, ಜನರು ಕೋವಿಗೆ ತಗುಲಿ
ವುರುಳುರುಳಿ ಬೀಳುವುದನ್ನು ನೋಡಲು ತುದಿಗಾಲಲ್ಲಿ ನಿಂತಿರುವರು. ರುಥಾ
ಮಾಡದೆ ಗುಂತಕಲ್ಲು ಸೀಮೆಯ ಮನೋ ಸಾಮುರಾಜ್ಯಕೊಡೆಯನಾಗಿರುವ
ಬೊಬ್ಬಿಲಿನಾಗಿರೆಡ್ಡಿಯ ವಂದೇ ವಂದು ಹನಿ ರಗುತವನ್ನು ರುಥಾ
ಮಾಡಿರುವುದುಂಟಾ? ತಮ್ಮವರು ಮನಪರಿವತ್ರನೆಗೊಂಡು ಮುನುಸೋಬಯ್ಯನ