ಪುಟ:ಅರಮನೆ.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೬

ಅರಮನೆ


ದೇಸಾಂತರ ಹೋಗೋದು, ಬರೋದು, ಯಿದ್ಯಾಮಾನಂಗಳ ವಸ್ತುಸ್ಥಿತಿ
ಯಿವರಿಸೋದು ಮಾಡುತಲಿದ್ದವು. ಅವುಗಳ ಅವುಸರ ಬವುಸರದಿಂದಾಗಿ
ಸ್ರವಣೇಂದ್ರಿಯು ನಯನೇಂದ್ರಿಯದೊಳಗೋ, ನಯನೇಂದ್ರಿಂಯ
ಸ್ರವಣೇಂದ್ರಿಯದೊಳಗೊ, ನಾಲಗೆ ಚರುಮದೊಳಗೋ, ಚರುಮ
ನಾಲಗೆಯೋಳಗೋ, ಯಾವುದೊಂದಕ್ಕೂ ನಿಲಕಡೇಕಯಿರಲಿಲ್ಲ...
ನೀರಡಕೆಯಿರಲಿಲ್ಲ.... ಯಿದರ ಪರಿಣಾಮವಾಗಿ ಆ ಪೂರುವಿಕನು ಕಿವಿಯಿಂದ
ನೋಡುತ್ತಾನೆ. ನಾಲಗೆಯಿಂದ ಕೇಳುತ್ತಾನೆ, ಚರುಮದೊಳಗೆ ನಾಲಗೆಯಿಂದ
ಹರದಾಡುತ್ತಾನೆ.. ತನಗೆ ತಾನೇ ಯಿಸುಮಯಗೊಳ್ಳುತ್ತಾನೆ. ತನ್ನ ಯಿಸುಮಯದ
ಸ್ಪಂದನಕ.. ಚಲನಸೀಲ ದೇವುಳವಾಗಿದ್ದ ಸಾರೋಟ ಕಿರಕೂ ಕಿರಕೂ ಯಂದು
ಅನುಪಲ್ಲವಿಯ ನುಡಿತಾ ಅಯ್ತೆ.. ವಂದು ಗಳಿಗೆ ಹೊತ್ತೊಳಗ ಗಿರ್ದ
ಎಚ್ಚರಗೊಳ್ಳುತ್ತಾನೆ, ಯರಡು ಗಳಿಗೆ ಹೊತ್ತೊಳಗೆ ಅರ್ದ ಯಚ್ಚರಗೊಳ್ಳುತ್ತಾನೆ,
ಮೂರು ಗಳಿಗೆ ಹೊತ್ತೊಳಗೆ ಮೂರು ಪಾವಲಿ ಯಚ್ಚರಗೊಳ್ಳುತ್ತಾನೆ.. ನಾಕು
ಗಳಿಗೆ ಹೊತ್ತೊಳಗ.. ಸಿವ ಸಂಕರ ಮಾದೇವಾSSS....
ಪೂರುವಿಕರ ಪಯ್ಕಿ ಪೂರುವಿಕನೂ, ಸಾಗರ ಗಾತರದವನೂ ಆದ
ಹಂಪಜ್ಜನು ಸಾಸುವೆ ಗಾತುರದ ಸಾರೋಟಿನಿಂದಿಳಿದೇಟಿಗೆ ಭೂಮಿ ಲಘುವಾಗಿ
ಕಂಪಿಸಿತು. ಮಂದಿ ನಿಂತು ನಿಂತಲ್ಲೆ ಹೊಯ್ದಾಡಿದರು, ಕುಂತು ಕುಂತಲ್ಲೇ
ಹೊಯ್ದಾಡಿದರು. ಅವಯ್ಯ ವಂಚಣ ಕಣ್ಣನ್ನಂಗಯ್ಯಗಲ ಮಾಡಿ ಸುತ್ತಮುತ್ತ
ನೋಡಿದೇಟಿಗೆ ಆಸ್ತೀಕಭಾರದಿಂದ ತತ್ತರಿಸಿ ಮಂದಿಯು ನಾಕು ಮೊಳ ಹಿಂದಕ್ಕೆ
ಜರಕ್ಕಂತು, ಅವಯ್ಯ ಮಸಮಸಾಂತ ದವಡೆ ಮಸೆದೇಟಿಗೆ ನಾನಾ ಗಿಡಗಳ
ಮ್ಯಾಲ ಕೂಕಂಡಿದ್ದ ತರಾವರಿ ಪಕ್ಷಿಗಳು ಹೆದರಕಂಡು ಚಿಮ್ಮಿ ಮುಗಲ
ಬಯಲೊಳಗ ರಂಗೋಲಿ ಬಿಡಿಸಿದವು, ಅವಯ್ಯ ತಲೆಕೊಡವಿದೇಟಿಗೆ
ಹೇನುಗಳ ರೂಪದಲ್ಲಿದ್ದ ಭೂತಗಣಂಗಳು ಪುತಪುತನೆ ನೆಲಕ್ಕುದುರಿ
ಕಂಡಕಂಡವರ ಕಡೇಕ ಧಾವಿಸಿದವು, ತಲೆಗೂದಲ ಗಂಟುಗಳು ಸಯ್ಲಾಗಿ
ಅವಯ್ಯನ ಪಾದದುಂಗುಟದವರೆಗೆ ಯಿಳಿ ಬಿದ್ದವು ಸಿವ.. ಸಿವಾSS.. ಅವಯ್ಯ
ಅಂಬಾ ಭವಾನೀ.. ಸಾಂಬವೀ ಯಂದುದ್ಗಾರ ತೆಗೆಯುತ ಗರ್ರನೆ ಕುಂಬಾರ
ತಿಗರಿಯಂತೆ ತಿರುಗಿಸಿದೇಟಿಗೆ ತಲೆಗೂದಲು ಹತ್ತು ಮಾರುದ್ದದ ಚಕ್ರಬಿಂಬ
ಕೋಟೆಯನ್ನು ರಚನೆ ಮಾಡಿತು ಸಿವನೇ.. ತಮ್ಮ ಪಟ್ಟಣವನ್ನು ಗುಳಮ್ಮಂತ
ನುಂಗಲಕ ಬಂದಿರುವ ಕಾಲಭಯ್ರವನೋ ಯಂದು ಮಂದಿ ಯದೆ ಬಿದ್ದರು