ಪುಟ:ಅರಮನೆ.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೫೨

ಅರಮನೆ

ಯಂಬಲ್ಲಿಗೆ ಸಿವ ಸಂಕರ ಮಾದೇವ.. ಯಿನ್ನೇನವಯ್ಯನು ಮುಂಡದಿಂದ
ರುಂಡವನ್ನು ಬೇರುಪಡಿಸಿ ವಸ್ತಿಯ ಹೊಕ್ಕುಳ ಮ್ಯಾಲಿಟ್ಟು ಆಲಂಕರಿಸಬೇಕು
ಯಂದು ನಿರ್ದಾರ ಕಯ್ನಕೊಂಡನು ಯಂಬಲ್ಲಿಗೆ ಸಿವಸಂಕರ ಮಾದೇವಾs
ಯಿನ್ನೇನವಯ್ಯನು.....
ಆನೆಗಾತುರದ ಮೋಡಗಳು ಸೂರ್ಯ ಪರಮಾತುಮನಿಗಡ್ಡ
ಪರಿಶೆಯೋಪಾದಿಯಲ್ಲಿ ನೆರೆತದ್ದೇನು ಸಿವನೇ.. ಗುಡುಗುಡೂಂತ ಗುಡುಗುಗಳು
ಹುಟ್ಟಿದ್ದೇನು ಸಿವನೇ.. ಪಡ್ಪಡಿಲ್ ಯಂದು ಸಿಡಿಲುಗಳು ಹುಟ್ಟಿದ್ದೇನು
ಸಿವನೇ.. ಫಳ್ಫಳಾರಂತ ಕೋಲ್ಮಂಚು ಕೋರಯಿಸಿದ್ದೇನು ಸಿವನೇ.. ಭಕುತಾದಿ
ಮಂದಿಯ ಬೆವರ ವುದುಕದೊಳಗ ಗಾಳಿಯ ಯಿಯಿಧ ಅವತಾರಗಳೆಲ್ಲ
ಮಜ್ಜಣಗಯ್ದು ಸೂತಕ ಮಯ್ಲಿಗೆಗಳ ಕಳಕೊಂಡದ್ದೇನು ಸಿವನೇ..
ವಸ್ತಿಯಚ್ಚರಗೊಳ್ಳುವ ಸೊಬಗನ್ನು ನೋಡಲೋಸುಗ ಹರಪನಳ್ಳಿ ರಾಯದುರ್ಗ
ಕಂಕಾಳದುರ್ಗ ಯಂಬೀವೇ ಮೊದಲಾದ ಛಪ್ಪನ್ನಾರು ದೇಸ, ಯಿದೇಸಗಳಿಂದ
ಹರಪಮ್ಮ ರಾಯಮ್ಮ ಕಂಕಾಳಮ್ಮ ಯಂಬಿವೇ ಮೊದಲಾದ ಛಪ್ಪನ್ನಾರು
ಪಟ್ಟಣದಮ್ಮಂದಿರು ಮನೆಯೇಗದಲ್ಲಿ ಬಿಜಿಯಂಗಯ್ತು ಪರಿ ಯೇನಂತ
ಹೇಳಲಿ ಸಿವನೇ.. ಅಲ್ಲಿ ಗೋಚರವಾಗುತಲಿದ್ದದ್ದು ಕಾಳಿನೋಟಿದ್ದರೆ
ಅಗೋಚರವಾಗಿ ನೆಲೆಕಂಡಿದ್ದು ಸತ ಸಹಸ್ರಕೋಟಿಯಾಗಿತ್ತು ಸಿವ.. ಸಿವಾss..
ಅದಲ್ಲ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಅಗಾಧವಾಗಿ ಘಟಿಸಿಬಿಟ್ಟಿತು.
ಬಟಾ ಬಯಲೆಲ್ಲಾ ವಂದs... ಕಣ್ಣs ಮುಡಕೊಂಡಿತ್ತು.. ವಂದs ಕಿವಿs
ಮುಡಕೊಂಡಿತ್ತು.. ವಂದs ಬಾಯನ ಮುಡಕೊಂಡಿತ್ತು. ಆ ಅನರಘ್ಯ ಹೊತ್ತಲ್ಲಿ
ವಸ್ತಿಯು ಮಿಸುಕಲಕ ಸುರುವು ಹಚ್ಚಿತ್ತು.. ಕಯ್ಕಿಗಳು ಮಿಸುಕಾಡಿದವು,
ಕಾಲುಗಳೂ ಮಿಸುಕಾಡಿದವು.. ಯೇನು ನುಡಿಯೋದು? ಯೇನು ಬಿಡೋದು?
ಯಂಬಂತೆ ಬಾಯಿ ತೆರೆಯೋದು ಮುಚ್ಚೋದು ಮಾಡಿತು....
ಹ್ಹಾ... ಹ್ಹಾ... ವಸ್ತೀSS.. ಹ್ಹೋ.. ಹ್ಹೋ... ವಸ್ತೀSS.. ಗುಡಿಹಿ೦ದಲ ಮೂಳೆ
ಮೋಬಯ್ಯನ ವಸ್ತಿಯೇ ಭೋ ಪರಾಕ್.. ಜಯನ್ನಾಮ ಪಾರೋತಿ ಪತಿ
ಹರಹರ ಮಾದೇವss.. ಅವ್ವ ಯಿಗಾ ಯೀಗಾ ಯದ್ದು ಕುಂತಗಂತಾಳss..
ಅವ್ವ.. ಅಗಾs..... ಆಗ ಬಾಯನ ತರೆದು ಮಾತಾಡುತಾಳ.. ಅವ್ವ ಯಿಗs ಯೀಗ
ಕಣ್ಣು ತೆರದು ನೋಡುತಾಳೆ.. ಅವ್ವ ಆಗs ಆಗ ಕಿವಿ ತೆರೆದು ಕೇಳಿಸಿಗಂತಾಳ
ಯಂದನಕಂತ....