ಪುಟ:ಅರಮನೆ.pdf/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರಮನೆ

೨೫೫

ವಂದುಗುಳನ್ನು ತಮ್ಮ ತಮ್ಮ ಅಂಗಯ್ಯಿಗೆ ತಕ್ಕೊಂಡು ತಾಯ ಪರಸಾದ
ಯಂದು ಭಾವಿಸಿ ಸೇವನೆ ಮಾಡಿದರು.. ಗತ ಪ್ರಾಣವಾಗಿದ್ದ ರಾಸುಗಳು,
ಕುಟುಕು ಜೀವ ಹಿಡಕೊಂಡಿದ್ದ ರಾಸುಗಳು, ನೆಲಕಚ್ಚಿ ಮಲಕ್ಕಂಡಿದ್ದ ರಾಸುಗಳು,
ಕಾಲುಬಾಯಿ ರೋಗ ವಡ್ಡಡಿ ಹೋದ ಪರಿಣಾಮವಾಗಿ ಮೆಲಮೆಲ್ಲಗೆ ಯದ್ದು
'ಅಂಬಾ' ಯಂದು ನಾದ ಮಾಡಿದವು....
ಯೀ ಪ್ರಕಾರವಾಗಿ ಹೊಸ ಜೀವದಿಂದ ಕಂಗೊಳಿಸಲಾರಂಭಿಸಿದ
ಮುರುಡಿಗೆ ಮುರುಡಿಯೇ ಕುದುರೆಡವಿದ್ದ ಕುಂತಳ ಪ್ರಾಂತದ ಕಡೇಕ
ಮುಖಮಾಡಿ 'ತಾಯೇ' ಯಂದು ಗದ್ಗದಿತಗೊಂಡಿತಂತೆ, ಸಣು ಮಾಡಿತಂತೆ....
ಆ ಚಣ ಚೆಲ್ಲಿದ ಮುಗುಳು ನಗೆಯು ವಸ್ತಿಯ ಕಪ್ಪಾನು ಕಪ್ಪನೆಯ
ತುಟಿ ಸಂದುಗಳಿಂದ ಜಿನುಗಿ ಜಿನುಗು ಹಳ್ಳವಾಗಿ ಕುದುರೆಡವು ಪಟ್ಟಣದ
ಹಾದಿ ಹಾದಿಗುಂಟ, ಬೀದಿ ಬೀದಿಗುಂಟ ಸುಧಾರಸ ಪ್ರಾಯವಾಗಿ
ಹರಿದಾಡಿತಂಬಲ್ಲಿಗೆ.. ಅದು ಆಸ್ತೀಕವು ಆಗಿತ್ತೆಂಬಲ್ಲಿಗೆ... ತಾಯಂದಿರ ಮೊಲೆಗಳು
ಹಾಲಿನಿಂದ ಜೀಕಾಡಿದವೆಂಬಲ್ಲಿಗೆ.. ಸಂತರಸ್ತ ಕೂಸು ಕಂದಮ್ಮಗಳು ಅವುಗಳ
ಗುಂಡಿಗಳನ್ನು ಜಮಡುತ್ತ ಅನುಗಾಲದ ಹಸಿವನ್ನು ತೀರಿಸಿಕೊಂಡವೆಂಬಲ್ಲಿಗೆ,
ಕೇಕೆ ಹಾಕಲಾರಂಭಿಸಿದ ಕಂದಮ್ಮಗಳನ್ನು ಮುದ್ದಾಡಿ ಮುಗುಲಿಗೆತ್ತಿ
ಹಿಡಿದರೆಂಬಲ್ಲಿಗೆ.. ಸಿವಸಂಕರ ಮಾದೇವಃss...
****
ನೀಳ ಸರೀರದ ಕಮಾಂಡರು ಥ್ಯಾಕರೆ ಅರ್ಥ ತಾಸು ಪರ್ಯಂತರ ಹೇಳಿದ್ದನ್ನು
ಕೇಳಿಕೊಂಡ ಮನ್ರೋ ಸಾಹೇಬನು, ಕರಣಂ ಸ್ರೀನಿವಾಸರಾವನ ಸರೀರದ
ಮ್ಯಾಲ ಅರ್ದಂಬದ್ಧ ವಾಸಿಯಾಗಿದ್ದ ಗಾಯದ ಗುರುತುಗಳನ್ನು ಕಣ್ಣಾರೆ ನೋಡಿದ
ರೀಡನ ಸಿಷ್ಯನಾದ ಮನ್ರೋ ಸಾಹೇಬನು ವಂದರಗಳಿಗೆ ಪಶ್ಚಾತ್ತಾಪದ
ಅಗ್ಗಿನಿಯೊಳಗೆ ಧಗಧಗ ದಹನಗೊಂಡನು. ತಾನು ಮತ್ತೊಮ್ಮೆ ನರಮೇಧಕ್ಕೆ
ಕಾರಣನಾದೆನಲ್ಲ ಪ್ರಭುವೇ ಯಂದು ವುರಿಯುತಲಿದ್ದ ಮೇಣದ್ದೀಪದ ನೆರಳಲ್ಲಿ
ಮುಷಿ«ಯಿಟ್ಟು ಅದಕ್ಕೆ ತನ್ನ ತಲೆಯನ್ನು ಜಜ್ಜಿಕೊಂಡನು.. ಕುರುಕ್ಷೇತ್ರದ
ರಣರಂಗದಲ್ಲಿ ಅಸಾಯಕಗೊಂಡು ಪಾರ್ಥನಿಗೆ ಸ್ರೀಕ್ರುಷ್ಣ ಭಗವಾನ ಹೇಳಿದ
ಮಾತುಗಳನ್ನು ಗ್ನಾಪಿಸಿಕೊಂಡನು.. ಯಿದರೊಳಗ ತನ್ನ ಪಾತ್ರಯಿರುವುದಾದರೂ
ಯೇನು? ತಾನು ಹೇಳಿ ಕೇಳಿ ಕುಂಪಣಿ ಸರಕಾರದ ಯಿನಮ್ರಸೇವಕನು..
ಸರಕಾರದ ಅಗೋಚರ ಹಸ್ತವನ್ನಲಂಕರಿಸಿರುವ ಮಾನವ ಆಯುಧವು.. ಕ್ರಿಯೆಯ