ಪುಟ:ಅರಮನೆ.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮೦

ಅರಮನೆ

ಆಗ್ಗೆ ಕುರುಗೋಡು ಯಿರುವ ದಿಕ್ಕಿಗೆ ಲಟ್ಟಿಗೆ ತೆಗೆದಿದ್ದಳು.. ಅಯಿವತ್ತಯ್ದರ
ತಾಯಕ್ಕ ವಡಮೂಡಿ ಹ್ಹಾ..ಹ್ಹಾ..ಯೀರಭೋಜ… ಹೋ ಹ್ಹೋ.. ಯೀರಭೋಜ
ಯಂದುದ್ಗಾರ ಮಾಡಿದಳು ಸಿವನೇ.. ಸರೀರದ ಆಯಕಟ್ಟಾದ ಭಾಗಗಳು
ಜಲಜಲಾಂತ ಬೆವೆತೊಡನೆ. ದೇವರೇ ವಂದೆರಡು ತಾಸು ಬುಗುಡಿ ನೀಲಕಂಠಪ್ಪ
ಬಾರದಿರಲಿ.. ಮಗಳು ಚಿನ್ನಾಸಾನಿ ಬಾರದಿರಲಿ.. ಬರಲಿರುವ ವಂಟೆಯ ಮ್ಯಾಲ
ಅವನಿಲ್ಲದಿರಲಿ... ಅವನಿಲ್ಲದ ವಂಟೆ ಬಾರದಿರಲಿ.....
ತಾನು ಅಡ್ಡಾಡಿರುವ ಅವಿಷ್ಟು ಸಮುಸ್ಥಾನಗಳ ಪಯ್ಕೆ ವಂದs ವಂದು
ಸಮುಸ್ಥಾನದಲ್ಲಿ ವಂಟೆ ಯಿತ್ತ ಯಂದಾಕೆ ಯೋಚನೆ ಮಾಡುತ್ತಿರುವಷ್ಟರಲ್ಲಿ....
ಅತ್ತ ಕುದುರೆಡವು ಪಟ್ಟಣದೊಳಗೆ ಸಾವುರ ಕಾಲುಗಳನ್ನೂರುತ
ಮಯಸೂರಿ ಯಂಬುವ ಕುದ್ರದೇವತೆಯು ತೂರಿಕೊಂಡಯ್ಕೆ ಯಂಬ ಗಾಳಿ
ವರಮಾನವನ್ನು ನಂಬಿ ಮಂದಿ ತಲಾಕೊಂದೊಂದು ಕಥೆಗಳನ
ಕಟ್ಟಲಾರಂಭಿಸಿದ್ದರು ಸಿವನೇ.. ಮಯಸೂರಿ ಅಂದರೆ ಯಾರು ಅಂತ ಕೇಳುವ
ಸಲುವಾಗಿ ತನ್ನ ಸುತ್ತಮುತ್ತ ಜಮಾಸಿದ ಮಂದಿಯನ್ನು ನೋಡಿದೊಡನೆ
ತೂಕಡಿಸುವಾತನಿಗೆ ಹಾಸಿಗೇನ ಹಾಸಿಕೊಟ್ಟಂತಾಯಿತು ಮುದೇತನಿಗೆ..
ಯಲಾಯ್ ಮಯಸೂರಿ.. ನಿನ್ನ ಲಗಾಯ್ತಿನಿಂದ ನೋಡುತ ಬಂದೀನಿ
ಕನಮೀ.. ನಿನ್ನ ಬಾಕುಲಾಗ ಬುಟೈಗವಾಕ್ಷೀಲಿ ಬಂದು ಕಾಟ ಕೊಡುವಿ
ಕನಮೀ.. ನಿನ್ನ ನಾನು ಸುಮ್ಮಕ ಬುಡಾಕಿಲ್ಲ ಕನಮ್ಮಿ.. ಯಂದು ಜೋರು
ಜೋರು ಹೇಳಿಕೊತ ಮಂತರ ವಟಗುಟ್ಟುತ್ತಿದ್ದುದೇನು? ತಾನು
ಮಾಡುತಲಿದ್ದುದೇನು.. ಮಣ ಮಣ ಲೋಬಾನ ಸುಡಲಾರಂಭಿಸಿ ದ್ದುದೇನು?
ಮಂದಿ ಯಂಭೋ ಮಂದಿಯನ್ನು ಭಯ ಭ್ರಾಂತಿಯ ಮಿಣಿಯಿಂದ ಕಟ್ಟಿ
ಹಾಕುತಲಿದ್ದುದೇನು? ವಂದೊಂದು ಕಥೆಯೊಳಗ ತಾನು ತರಾವರಿ ಗೋಚರ
ಮಾಡಲಾರಂಭಿಸಿದ್ದುದೇನು? ಆತನಿದ್ದ ಕಥೆಗಳು ವಂದೊಂದೂ
ಸಹಸ್ರಪದಿಗಳಾಗಿ ಪಟ್ಟಣದ ಗಡಿ ದಾಟಿ....
ಸುತ್ತನ್ನಾಕಡೇಲಿದ್ದ ಮೂರು ಪಾರುಗಳಿಂದ ಮಂದಿ ಯಂಭೋ ಮಂದಿ
ಸದರಿ ಪಟ್ಟಣದ ಕಡೇಕ ಹರಿಯಲಾರಂಭಿಸಿತು. ಅಲ್ಲಿ ನೋಡಿದರ ಆಸುಮಂದಿ
ಸಿವನೇ.. ಯಿಲ್ಲಿ ನೋಡಿದರ ಯೇಸು ಮಂದಿ ಸಿವನೇ.. ಯಲ್ಲೆಲ್ಲಿ ನೋಡಿದರೂ
ಯೇಸೇಸೋ ಮಂದಿ ಸಿವನೇ.. ಅವೀಸು ಮಂದಿ ವುಂಬುವುದೆಂಗ?
ಕುಡಿಯೋದೆಂಗ? ಮಲಗೋದೆಂಗ ಸಿವನೇ? ದಾನ ದರುಮಿಷ«ರಿಂದಾಗಿ ಯಲ್ಲಿ