ಪುಟ:ಅರಮನೆ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩ ನೋಡುತಯಿರಲಿಲ್ಲ, ಕೆಳಗಿದ್ದೋರು ಮ್ಯಾಲಿದೋರನು ನೋಡುತಯಿರಲಿಲ್ಲ... ಹಿಂದಿದ್ದೋರು ಮುಂದಿರನ್ನಾಗಲೀ, ಮುಂದಿರು ಹಿಂದಿದ್ದೋರನ್ನಾಗಲೀ, ಎರಡಕ್ಕಿದೋರು ಬಲಕ್ಕಿದ್ದೋರನ್ನಾಗಲೀ, ಬಲಕ್ಕಿದ್ದೋರು ಯಡಕ್ಕಿದ್ದೋರ ನ್ನಾಗಲೀ ಗಮನಿಕೆ ಮಾಡುತ ಯಿರಲಿಲ್ಲ... ಅವರದ್ದೊಂದು ನಮೂನಿ ಮಟ್ಟಸ ಬದುಕಾಗಿತ್ತು..... ಅಂಥ ಬದುಕು ಹೆಪ್ಪುಗಟ್ಟಿ ಮಲೆತು ನಿಂತಿದ್ದ ಆ ಗ್ರಾಮವು ಪಟ್ಟಣದ ಪೋಷಾಕನ್ನು ಸದಾ ಧಾರಣ ಮಾಡಿರುತಲಿತ್ತು ಕುಂತಳ ಪ್ರಾಂತ ಯಂಬುವ ಮಜ್ಜಿಗೆ ಗುಡಾಣದೊಳಗೆ ಬೆಣ್ಣೆವುಂಡೆಯಂಗೆ ತೇಲಾಡುತ್ತಲಿದ್ದ ಆ ಪಟ್ಟಣದೊಳಗೆ ಆ ವಂದು ಚಣ ಯಾಪಾಟಿ ರುತುಮಾನ ಪರಪಾಟಾಯಿತೆಂದರೆ ಆ ದಿನ ವುದಿಸಿದ್ದೇ ವಯಶಾಖ ಜಾತಿಯ ಮದ್ಯಾಣದ ಸೂರನು ಯೇರುತ ಯೇರುತ ಪ್ರತಿಯೊಬ್ಬರ, ಪ್ರತಿಯೊಂದರ ನೆತ್ತಿ ಮ್ಯಾಲಕ ಬಂದಾತನು ಧಗಧಗನೆ ಸುಡುತಲಿದ್ದ. ತನ್ನ ಬಿಸಿಲ ತೋಳುಗಳಿಂದ ಹೊರಗೆ ಆಡುತಲಿದ್ದ ಮಕ್ಕಳು ಮರಿಗಳನು, ಮಂದಿಯ ಕತ್ತುಗಳನ್ನು ಹಿಡಿದು ಅವರವರ ಮನೆವಳಗಡೆ ತಳ್ಳಿ ಹಾ... ಹೂ ಯಂದು ವುಸುರು ಬಿಡುವಂತೆ ಮಾಡಿದ. ಗಳಗಳಿಗೊಮ್ಮೆ ನೀರು ಕುಡಿಯುವಂತೆ ಮಾಡಿದ. ಸೆಖೆ ತಾಳಲಾರದೆ ಮಂದಿ ತನ್ನನ್ನು ಬಯ್ಯುವಂತೆ ಮಾಡಿದ, ಬಿಸಿಲ ಕೋಲುಗಳಿಂದ ವಬ್ಬೊಬ್ಬರನ್ನು ಬಡಿದು ಹಿಂಸಿಸಿದ. ನೂರಾರು ಬಿಸಿಲುಗುದುರೆಗಳನ್ನು ಬೀದಿ ಬೀದಿ ತುಂಬೆಲ್ಲ, ಬಯಲು ಬಯಲು ತುಂಬೆಲ್ಲ ಅಂಡಲೆಯುವಂತೆ ಮಾಡಿದ. ಯಿಡೀ ಸಮಸ್ತ ಪಟ್ಟಣವನ್ನು ತನ್ನ ಅಗಾಧವಾದ ಮ್ರುಗಜಲದಿಂದ ತೊಯ್ದು ತಪಟ್ಟೆಯಾಗುವಂತೆ ಮಾಡಿದ. ಬಿಸಿಲೆಂಬುವ ಚಕ್ರಾಧಿಪತ್ಯ ಸ್ಥಾಪಿಸಿ ಬಿಸಿ ಯಂಬ ಅಧಿಕಾರವನ್ನು ತಾನು ಚಲಾಯಿಸುತ್ತಿರುವಾಗ್ಗೆ ಅಗಾಧವಾದ ಮವುನ ಬಿತ್ತಿ ಬೆಳೆಯುತ್ತಿರುವಾಗ್ಗೆ.. ಕೊರೆದ ಚಿತ್ರದಂತೆ ಪಟ್ಟಣ ಬಿಕೋ ಅನ್ನುತ್ತಿರುವಾಗ್ಗೆ.. ಥಳಗೇರಿಗಳಗೆಲ್ಲ, ಮಕುಟಪ್ರಾಯದಂತಿದ್ದ ಎಂದು ಥಳಗೇರಿಯ, ಕೆಮ್ಮಿದರೆ ವಂದು ಪುಟ್ಟಿ ಮಣ್ಣುವುದುರಿಸುತಲಿದ್ದ ವಂದು ಮನೆಯ ಅಂಗಳದಲ್ಲಿದ್ದ ಎಂದು ಕಟ್ಟೆಯ ಮ್ಯಾಲ ಬಲಗಾಲನ್ನು ನೆಲಕ್ಕಿಳಿಬಿಟ್ಟು ಯಡಗಾಲ ಪಾದವನ್ನು ತೊಡೆ ಸಂದಿಗಂಟಿಸಿಕೊಂಡು, ಮೊಣಕಾಲ ಚಿಪ್ಪಿನ ಮ್ಯಾಲ ಬಲಗಯ್ಯನ್ನು ವುಟ್ಟೋಕೆ ಚಾಚಿ, ಯಡಗಯ್ಯನ್ನು ತಲೆಗಾನಿಸಿಕೊಂಡು ಬೀದಿಯ ತುದಿಯಲ್ಲಿ ಮೂಡಿ ಮರೆಯಾಗುತಲಿದ್ದ ಬಿಸಿಲುಗುದುರೆಯತ್ತ ದ್ರುಸ್ಸಿ ಅಂಟಿಸಿ ವಡಲೊಳಗಿನ ನೀರು ಅಳ್ಳಾಡದಂಗೆ ಕೂಕಂಡಿದ್ದ...