ಪುಟ:ಅರಮನೆ.pdf/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭೦

ಅರಮನೆ

________________


ಬದಲಿಸಿ ತಾಯ್ತನಕ್ಕೆ ಹಿತ ಮಾಡುತ್ತಿದ್ದ ಹೊತ್ತಿನಲ್ಲಿ....
ಯಿಳಿತಾss ಯಿಳಿತಾss ಬಂದಿಳಿಯಿತಂತೆ.. ಜಗಲೂರೆವ್ವಯೆಂಬುವ
ಕನುಕರದ ಕಡಾಯಿ ಮುಂದುಗಡೇಕೆ.. ಮಂಪಡರಿದ್ದ ಆಕೆಯ ಕಣ್ಣಿಗೆ ವಂದು
ಛಣ ಚಂದ್ರಾಮನ ಚಿಗದೊಡಪ್ಪನ ಮಗನೇನೋ ಯಂಬಂತೆ ಭಾಸವಾಯಿತಂತೆ..
ನೋಡಿದೊಡನೆ ಯದೆ ಧಸಕ್ಕಂದಂಗಾತಂತೆ.. ಯಪ್ಪಾ ನೋಡಿಲ್ಲಿ ಯಂದು
ತೋರಿಸಲಾಕೆಯು ಅವುದಲ್ಲೆವ್ವಾಯಂದಾತನ ಯದೆಯೂ ಧಸಕ್ಕಂದಂಗಾತಂತೆ....
ಯಿದು ಕಣಸೋ ನಣಸೋ.. ಮಾಯಮೋ... ಮಂತುರಮೋ.. ಹಿಂದಕ
ಜರುಗಿದರ ಮುಂದು ಮುಂದಕ.. ಮುಂದಕ ಸರುದರೆ ಹಿಂದು ಹಿಂದುಕ
ಬರತಯ್ತಲ್ಲಾ.. ತಿಂಬಲಕ ಯಂಬಂತೆ ಬಾಯನ ಹಸು ಮಗೀನಂಗೆ
ತೆರೆತಯ್ತಲ್ಲಾ.. ಕೆನೆಕೆನೆದು ನಿಶ್ಯಬುಧದ ಕೇಕೆ ಹಾಕತಯ್ತಲ್ಲಾ.. ಮೂಗಿನಿಂದ
ಬುಸು ಬುಸನೆ ವುಸುರಾಡುತಯ್ತಲ್ಲಾ.. ಬಾಲ ಮಾಪ್ಯಾಡಿ ತಂಗಾಳಿ ಗದು
ಮುತಯ್ತಲ್ಲಾ... ಕಣ್ಣೊಳಗ ಕಂದೀಲು ಮುಡುದಯ್ತಲ್ಲಾ.. ನಾಲಿಗೆ ಚಾಚಿ
ಬೆಳದಿಂಗಳನ ನಾಕತಯ್ತಲ್ಲಾ...
ಯಿದೇನಿದು ಸಿವನೇ.. ಯೀ ಜಲಗುದುರೆಯು ಯಾವ
ಲೋಕದಿದ್ದರಬೌದು? ಮಾಯಾವಿ ಹಂಪಜ್ಜನೇನಾರ ತಮ್ಮನ್ನು ಸರುವನಾಶಣ
ಮಾಡುವ ಸಲುವಾಗಿ ಕಳಿಸಿದ್ದಿರಬೌದಾ? ಯಂದೊಂದು ಛಣ.. ತಾಯಂದಿರ
ಯದೆ ಹಾಲಿನಿಂದಿದು ಅವಿರ್ಭವಿಸಿರಬೌದಾ? ಸೃಷಿ«ಕರ್ತನು ತಮ್ಮನ್ನುದ್ಧಾರ
ಮಾಡುವ ಸಲುವಾಗಿ ಕಳಿಸಿದ್ದಿರಬೌದಾ? ಯಂದೊಂದು ಛಣ ಆಲೋಚನೆ
ಮಾಡೀ ಮಾಡೀ ಜಗಲೂರೆವ್ವ ಯಲಾಯ್ ಜಲಗುದುರೆಯೇ.. ನೀನ್ಯಾರು?
ಯದಕ ಬಂದಿಯಂದು ರವುಸದಿಂದ ಕೇಳಿದಳಂತೆ. ಮಯ್ಯಕೊಡವಲಾಗಿ ಅದರ
ವಂಚೂರು ದ್ರಾವಕ ಸೀದ ಆಕೆಯ ಮಯ್ಯೊಳಗ ಯಾಪನ ಮಾಡಿತಂತೆ..
ನಿಧ ನಿಧಾನವಾಗಿ ಮೂಡಲಾರಂಭಿಸಿದ ವಂದು ಚಿತ್ರವು ಕ್ರಮ ಕ್ರಮೇಣ
ಸೂರಯ್ಯ ತಾನಾಗಿ ಬಿಟ್ಟಿತಂತೆ.. ತಾಯಿ.. ನಾನು ಬಂಧನದಲ್ಲಿರುವೆನು ಯಂದು
ಹೇಳಿದಾಂಗಾತಂತೆ.. ಸೂರಯ್ಯಾ ಯಂದು ತಾನು ಅದರ ಡುಬ್ಬದ ಮ್ಯಾಲ
ಕೂಕಳ್ಳುತ್ತ ತನ್ನಪ್ಪಗ ಯಪ್ಪಾ.. ಯಿರೋ ಸಂಗತೀನ ವಡಲೊಳಗಿಟುಕೊಂಡು
ಯಿಲ್ಲೇ ಯಿರು.. ಹಿಂಗ ಹೋಗಿ ಹಂಗ ಬರುವ ನನಗೆ ಅಂಜಿಕೆ ಅಪೂಟಿಯಿಲ್ಲ
ಯಂದು ಹೇಳಿದಳಂತೆ..
ರೆಕ್ಕೆಗಳನ ಮಾರಗಲ ಹರಡಿ, ಮುಂಗಾಲೂರಿ ಮುಗುಲಿಗೆ ನೆಗೆದ ಆ