ಪುಟ:ಅರಮನೆ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೧ ಭಲಾಯಂದು ವುದ್ದರಿಸುತ್ತಲಿದ್ದನು. ತನಗೆ ತಾನು ಮುತ್ತುಂಜಯನೇ ಆಗಿದ್ದನು ಸಿವ ಸಂಕರ ಮಾದೇವಾss ಅತ್ತ ಜರುಮಲಿಗೂ ನಿಚ್ಚಾಪುರಕೂ ನಡುವೆ ನಿಲುವಂಜಿಯಿಂದ ವುತಾರಗೊಂಡಿದ್ದ ಸಾವುರೆಕರೆ ಬಯಲಲ್ಲಿ ವಾರ ದಿನಮಾನ ಪರಂತ ಘನಘೋರ ಕಾಳಗ ಸಂಭವಿಸಿತಷ್ಟೆ, ಅವರ ಪಯ್ಕೆ ಯಾರೂ ಸೋಲಲಿಲ್ಲ, ಯಾರೂ ಗೆಲ್ಲಲಿಲ್ಲ. ಯರಡೂ ಕಡೇಲಿ ವಂದೇ ಮೂಲದಿಂದ ಬಂದಿದ್ದ ಸಯೀಕರು ವಬ್ಬರನ್ನೊಬ್ಬರು ಸತ್ತುಗೊಲ್ಲುವುದು ಯಾಕಂತ ಹೋರಾಟವನ್ನು ನುರಿತ ನಟರಂತೆ ಅಭಿನಯಿಸಿದರೆಂದೇ ಹೇಳಬೇಕು. ಹಿಮ್ಮೆಟ್ಟಿಸಿದಂತೆ ಮಾಡಿದರು, ಹಿಮ್ಮೆಟ್ಟಿದಂತೆ ಮಾಡಿದರು, ತಮ್ಮ ತಮ್ಮ ಸರೀರಗಳನ್ನು ಗೀರಿಕೊಂಡು ರಾಮಾ ರಗುತ ರಂಪಾಟ ಮಾಡಿಕೊಂಡವರಂತೆ ತೋರುಪಡಿಸಿಕೊಂಡರು. ಯೀ ಅಯ್ತಿಹಾಸಿಕ ಕಾಳಗದಿಂದಾಗಿ ರುಣವಂದಿಗರಾದ ಆಯಾ ರಾಜರು ತಮ್ಮ ತಮ್ಮ ಕಯ್ಯಗಳನ್ನು ಹಿಚುಕಿ ಕೊಂಡರೇ ಹೊರತು ವಬ್ಬರ ಮ್ಯಾಲೊಬ್ಬರು ಹಲ್ಲು ಕಡಿಯುವುದನ್ನು ಮಾತ್ರನಿಲ್ಲಿಸಲಿಲ್ಲ. ನಗದುಕೊಟ್ಟು ಬಡ್ಡಿ ಚಕ್ಕರಬಡ್ಡಿ ತೀರಿಸಲಾಗದ್ದಕ್ಕೆ ಜರಿಯಲೆ ರಾಜನು ತನ್ನ ರಾಜ್ಯದ ಕೆರೆಕವುಲರ ಹಟ್ಟಿ ಅಮರದೇವರ ಗುಡ್ಡ, ಭದ್ರದೇವರ ಗುಡ್ಡ, ಅಮ್ಮನಕೇರಿಗಳನ್ನೂ ನಿಚ್ಚಾಪುರದ ರಾಜನು ತನ್ನ ರಾಜ್ಯದ ಪ್ರಥಯಿಸ್ವರ, ಚಿಗಟೇರಿ, ಮಯೂರು, ಯಿಟ್ಟಿಗೆ, ಹೊಂಬಳಗಟ್ಟಿಗಳನ್ನೂ ಪರಿಪಾಲನಾರವಾಗಿ ಕುಂಪಣಿ ಸರಕಾರದ ಸುಪದ್ದಿಗೆ ಬಿಟ್ಟುಕೊಟ್ಟನು ಯಂಬಲ್ಲಿಗೆ ಸಿವಸಂಕರ ಮಾದೇವಾ.. ಚಾಣಾಕ್ಷ ಅಧಿಕಾರಿಯಾದ ರೆಬೆರೋ ಮಾಶಯನು ತಾನಿದ್ದಲ್ಲಿ ಜರಿಮಲೆ ರಾಜನನ್ನು ಬರಮಾಡಿಕೊಂಡು “ಜಗದಪ್ಪ ನಾಯಕರೇ.. ನೀವು ಕುಂಪಣಿ ಸರಕಾರಕ್ಕೆ ಕ್ಷೇಮ ಬಯಸುತ್ತಿರುವಿರಿ.. ನಿಮ್ಮ ಯೋಗಕ್ಷೇಮವನ್ನು ಕುಂಪಣಿ ಸರಕಾರ ಯಿಚಾರಿಸುತ್ತಿರುವುದು. ನಿಚ್ಚಾಪುರದ ರಾಜ ನಿಮಗೆ ಮಾಡಿರೋ ದ್ರೋಹ ಸರಕಾರದ ಗಮನಕ್ಕೆ ಬಂದಿರುವುದು. ಅದಕ್ಕೆ ಮುಂದೊಂದು ದಿನ ಕುಂಪಣಿ ಸರಕಾರ ನಿಚ್ಚಾಪುರದ ಮ್ಯಾಲ ದಂಡೆತ್ತಿ ಹೋಗಬೇಕೆಂದಿರುವುದು.. ಆಗ ನೀವು ದಂಡು ದವಲತ್ತು ಸಮೇತ ಬಂದು ಸಾಯ ಮಾಡೋಕು” ಯಂದು ಕೇಳಿಕೊಂಡನು. ಅದಕ್ಕೆ ನಾಯಕನು ಹಿಂದಕು ಮುಂದಕು ನೋಡದೆ ವಪ್ಪಿಕೊಂಡು ಕರಾರಿಗೆ ದಸರತ್ತು ಹಾಕಿ ಬೀಳುಕೊಂಡು ಹೊರಟು ಹೋದನು. ಮುಂದೊಂದು ದಿವಸ ರೆಬೆರೋ ಮಾಶಯನು ತಾನಿದ್ದಲ್ಲಿಗೆ ನಿಚ್ಚಾಪುರದ ರಾಜನನ್ನು ಬರಮಾಡಿಕೊಂಡು “ಬಾಲಪ್ಪ ನಾಯಕರೇ”