ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮
ಜನಪದ ಕಥೆಗಳು

ಅಣ್ಣನು ಸಿಟ್ಟಿನಿಂದ ಮನೆಗೆ ಹೋಗಿ ಕೊಡಲಿ ತಂದು ಮರಕಡಿಯಲು ಅನುವಾದನು. ಬಿಂಬಾಲಿ ಸೂರ್ಯನನ್ನು ಪ್ರಾರ್ಥಿಸಿದಳು- "ಸ್ವಾಮೀ, ನನಗೊಂದು ನೂಲಿನುಂಡೆಯನ್ನು ಬಿಡು." ಆಕಾಶದಿಂದ ನೂಲಿನುಂಡೆ ಬರಲು ನೂಲು ಹಿಡಿದು ಆಕೆ ಸೂರ್ಯಲೋಕಕ್ಕೆ ಹೋದಳು. ಅಲ್ಲಿ ಅವನು ಆಕೆಯನ್ನು ಲಗ್ನವಾದನು.

ಬಿಂಬಾಲಿ ಬಸುರಿಯಾಗಿ ನವಮಾಸ ತುಂಬಿ ಸೂರ್ಯದೇವನಂಥ ಮಗನನ್ನು ಹಡೆದು ಸುಖದಿಂದ ಇರತೊಡಗಿದಳು. ಒಂದು ದಿನ ಪತಿ ಇದ್ದಕ್ಕಿದ್ದ ಹಾಗೆ- "ಬಿಂಬಾಲಿ, ನನ್ನ ತಲೆಗೂದಲು ಬಿಡಿಸಿ ನೋಡು. ತಲೆಯೇಕೆ ತುರಿಸುತ್ತದೆ" ಎಂದನು.

ಪತಿಯ ತಲೆಗೂದಲನ್ನು ಬಿಡಿಸಿನೋಡುತ್ತಿರುವಾಗ ಬಿಂಬಾಲಿಗೆ ತನ್ನ ತಾಯಿಯ ನೆನಪಾಯಿತು. ಚಿಕ್ಕಂದಿನಲ್ಲಿ ತಾಯಿಯ ತಲೆಸೋಸಿ ನೋಡಿದ್ದಳು. ದುಃಖದಿಂದ ಕಣ್ಣು ತುಂಬಿ ನಾಲ್ಕು ಹನಿ ಉದುರಿದವು. ಅವು ಪತಿಯ ಮೇಲೆ ಬೀಳಲು-"ಮೋಡವಿಲ್ಲ ಮಳೆಯಿಲ್ಲ, ಇದೆಲ್ಲಿಯ ನೀರು" ಎಂದು ಕತ್ತೆತ್ತಿ ನೋಡಿದರೆ ಬಿಂಬಾಲಿ ಅಳುತ್ತಿದ್ದಾಳೆ. ಅಳುವ ಕಾರಣವೇನೆಂದು ಕೇಳಲು ಆಕೆ ಹೇಳಿದಳು-"ನನ್ನ ತಾಯಿಯ ಹಂಬಲವಾಯ್ತು.ಕಣ್ಣೀರು ಬಂತು."

"ಹಾಗಾದರೆ ನಿನ್ನನ್ನು ಇಂದೇ ಕೆಳಗಿನ ಲೋಕಕ್ಕೆ ಕಳಿಸುತ್ತೇನೆ. ಮಗುವನ್ನು ಕರೆದುಕೊಂಡು ತಾಯಿತಂದೆಗಳ ಬಳಿಗೆ ಹೋಗಿ ಬಾ"ಎಂದು ಸೂರ್ಯದೇವನು ನೂಲುಂಡೆಯ ಏಣಿಯನ್ನು ಬಿಟ್ಟನು. ಬಿಂಬಾಲಿ ನಾಣ್ಯದ ಚೀಲ ತೆಗೆದುಕೊಂಡು ನೂಲೇಣಿಯಿಂದ ಮಧ್ಯರಾತ್ರಿಯ ಹೊತ್ತಿಗೆ ತವರು ಮನೆಯ ಅಂಗಳದಲ್ಲಿ ಇಳಿದಳು. ಮನೆಯ ಬಾಗಿಲು ಮುಚ್ಚಿತ್ತು.ಬಿಂಬಾಲಿ ಕರೆದಳು-

"ಓ ಅಪ್ಪ, ಓ ಅವ್ವ, ಗೆಜ್ಜೆಕಾಲ ಮೊಮ್ಮಗ ಬಂದ
ಗಿಲ್ ಗಿಲ್ ನುಡಿಸ್ತನಿಂದ. ಓ ಅಪ್ಪ ಅಮ್ಮ ಬನ್ನಿ"

ಸೂರ್ಯದೇವನು ಮಾಯದ ನಿದ್ರೆ ಕಳಿಸಿ,ಅವರು ಎಚ್ಚರಿಲ್ಲದಂತೆ ಮಾಡಿದ್ದರಿಂದ ಅವರಾರೂ ಏಳಲಿಲ್ಲ; ಕದ ತೆರೆಯಲಿಲ್ಲ.

"ಓ ಅಣ್ಣ ನನ್ನಣ್ಣ ಗೆಜ್ಜೆಕಾಲ ಅಳಿಯ ಬಂದ
ಗಿಲ್ ಗಿಲ್ ನುಡಿಸ್ತನಿಂದ ಓ ಅಣ್ಣ ಕದ ತೆಗೆಯೋ"

ಅಣ್ಣನೂ ಬರಲಿಲ್ಲ. ಅಂಗಳದಲ್ಲಿ ಬತ್ತ ಕುಟ್ಟುವ ಒರಳಲ್ಲಿ ತಾನು ತಂದ ಹೊನ್ನ ನಾಣ್ಯಗಳನ್ನು ಚೆಲ್ಲಿ, ಮುಂದೆ ನಡೆದು ನೆರೆಮನೆಯ ಅಜ್ಜಿಯನ್ನು ಕರೆದಳು-