ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಜನಪದ ಕಥೆಗಳು

"ನಾನು ಕೊಡಬೇಕಾದ ಅರಸೊತ್ತಿಗೆಗಳೆಲ್ಲ ತೀರಿಹೋದವು. ಮತ್ತೇನಾದರೂ ಕೇಳಿಕೋ ಕೊಡುವೆನು.

"ನನಗೆ ಅರಸೊತ್ತಿಗೆಯೇ ಬೇಕಾಗಿತ್ತು" ನೇಕಾರನು ತಡವರಿಸುತ್ತ ಹೇಳಿದನು. ಬ್ರಹ್ಮದೇವನು ಕೆಲಹೊತ್ತು ವಿಚಾರಮಗ್ಗನಾಗಿ ಆ ಬಳಿಕ ಹೇಳಿದನು

"ರಾತ್ರಿರಾಜನಾಗುವೆಯಾ ?”

"ಆಗಲಿ. ಎಂಥದೇ ಆಗಲಿ. ರಾಜನಾದರೆ ಸಾಕು. ಕೊಟ್ಟುಬಿಡಿರಿ" ಎಂದು ಹಿರಿಹಿಗ್ಗಿನಲ್ಲಿ ಕೇಳಿದನು.

"ಕೊಟ್ಟಿದೆ ಹೋಗು" ಎಂದನು ಬ್ರಹ್ಮದೇವ.

***

ಹಳ್ಳಿಯ ಬಯಲಾಟದ ಮೇಳದವರು ಪ್ರತಿಯೊಂದು ಆಟದಲ್ಲಿ ಆ ನೇಕಾರನಿಗೇ ರಾಜನ ಸೋಗು ಕೊಡತೊಡಗಿದರು. ಬಡ ನೇಕಾರನು ದುಡಿದು ದುಡಿದು ಬಡಕಲಾಗಿದ್ದನು. ಗಲ್ಲಗಳೆಲ್ಲ ಕರಗಿ ದವಡಿಗೆ ಹತ್ತಿದ್ದವು. ಕಣ್ಣು ಒಳಸೇರಿದ್ದವು. ಅವು ಅಸಹ್ಯವಾಗಿ ಕಾಣಿಸಬಾರದೆಂದು ನೇಕಾರನು ಕಣ್ಣಿಗೆ ಬಣ್ಣದ ಕನ್ನಡಕ ಧರಿಸುವನು. ಗಲ್ಲಮೀಸೆ ಹಚ್ಚಿಕೊಳ್ಳುವನು. ಅದಕ್ಕಾಗಿ ಮೇಳದವರು ಬಣ್ಣದ ಕೋಣೆಯಲ್ಲಿ ಹರಕಲಾದ ಒ೦ದು ಉಣ್ಣೆಯ ಝಾನ (ಥಡಿ) ತಂದಿಟ್ಟರು. ಬಟ್ಟಲಲ್ಲಿ ಅರೆದ ಅಂಟು ನೆನೆಯಿಟ್ಟರು.

ಪ್ರತಿಯೊಂದು ಸೋಗು ರಂಗಸ್ಥಳಕ್ಕೆ ಕುಣಿಯುತ್ತಲೇ ಬರುವದು. "ಝೆಂತತ ಝಣತ ಕಡಕಡ ಝೇಂತತ ರುಣತ । ತಯಾ ತೋಮ್ಲದರಿನಲಾ" ಎಂದು ತಿಲ್ಲಾಣವಾಡುವುದು ವಾಡಿಕೆಯಾಗಿದೆ. ಆದರೆ ಅದಕ್ಕೆ ಅರ್ಥವೇನು, ಯಾರಿಗೂ ತಿಳಿಯದು.

"ಝಾನ್‌ ತಾ| ಕಡಕಡ್ಡು ತಾ|

ಜಿಗಿತಾ | ಝಾನತಾ

ತಗೊಂಡು ಬರಲಿಲ್ಲ ಲಾ?"

ಎನ್ನುವುದೇ ಆ ವೀರಾವೇಶದ ರಾಜನ ವೀರವಾಣಿ.

ಬ್ರಹ್ಮದೇವರಿತ್ತ ವರಪ್ರಸಾದದಿಂದ ನೇಕಾರನು ರಾತ್ರಿರಾಜನಾಗುತ್ತಲೇ ಬಂದನು. ಅವನ ಆ ವತನವನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ರಾತ್ರಿರಾಜ ಅವನು.

 •