ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xii

ಸಂಕಟವನ್ನು ಮನಬಿಚ್ಚಿ ಕಥಿಸತೊಡಗಿತಂತೆ-"ನನ್ನನ್ನು ಕಡಿದು ಹಾಕಬೇಕೆಂದು ವಿಚಾರಿಸುತ್ತಿದ್ದಾರೆ. ಅವರಿಗೆ ತಿಳಿಹೇಳಿ ಕಡಿದುಹಾಕದಂತೆ ನೀವು ಮನವೊಲಿಸಿರಿ" ಎಂದು ಅಂಗಲಾಚಿತಂತೆ.

ಅಳುವುದು-ಕರೆಯುವುದಾಗಲಿ, ನಗುವುದು-ಕಲೆಯುವುದಾಗಲಿ ಮಾತಿನ ತರ್ವಾಯವೆ. ಹೆಣ್ಣು ಮಕ್ಕಳು ಬಳೆಗಾರನ ಕಡೆಯಿಂದ ಬಳೆಯಿಡಿಸಿಕೊಳ್ಳುವ ಸಂದರ್ಭವನ್ನು ಒಂದು ಒಡವು ವರ್ಣಿಸುವುದು ಹೇಗೆಂದರೆ-

ಮಾತುಕಥೆ ಯಾವಾಗ ? ಕೈ ಕೈ ಹಿಡಿದಾಗ

ಅಳೂದು ಕರೆವುದು ಯಾವಾಗ? ಅರ್ಧಒಳಸೇರಿದಾಗ

ನಗೂದು ಕಲೆವೂದು ಯಾವಾಗ? ಪೂರ್ಣ ಒಳಸೇರಿದಾಗ

ದಾಂಪತ್ಯಾರಂಭದಲ್ಲಿ ಗಂಡನ ಕಥನ ತಂತ್ರದಿಂದ ಹೆಂಡತಿಯ ಬಾಯಿ ಮುಗುಳೊಡೆದು, ಒಮ್ಮೆ ಕಥನಕ್ಕೆ ಆರಂಭವಾದರೆ, ಗಂಡನ ಕಥನ ತಂತ್ರವೆಲ್ಲ ಹುಸಿಗೂಂಡು ಅವರು ಮೂಕವಿಸ್ಮಿತನಾಗುವಂತೆ ಮಾಡುತ್ತದೆ. ಪುರುಷನು ಚಾಣಕರಯನ ಕಥೆ ಹೇಳುವುದರಲ್ಲಿ ನಿಷ್ಣಾತನಾಗುವಂತೆ, ಸ್ತ್ರೀಯು ಸಣ್ಣ ಸಂಗತಿಯನ್ನೇ ಕಥೆಮಾಡಿ ಹೇಳುವುದಕ್ಕೆ ಬಲ್ಲಿದಳಾಗುತ್ತಾಳೆ.

ಕೂಸು ಅಳುನುಂಗಿದ ಬಳಿಕ ನಗೆಯ ಬಗೆಯನ್ನು ಹಾರುತ್ತದಷ್ಟೇ? ಅಳುವಿನ ಹಾಡು ಹಾಲಾಗಿ ಒಡಲ ಸೇರಿದ ಬಳಿಕ, ಕಥನದ ಪಾಡು ಬೇಡುವುದು ಮಗುವಿಗೆ ಸ್ವಾಭಾವಿಕವೇ ಆಗಿದೆ. ಲಾಲಿಯನ್ನು ಆಲಿಸಿ, ಲಲ್ಲೆಯನ್ನು ಕೇಳಿ, ತಿಲ್ಲಾಣವನ್ನು ಆಕಲನ ಮಾಡಿ ಸಾಕಾದ ಮಗುವಿಗೆ ಬೇಕಾದುದು ಕಥೆ. ಅಜ್ಜಿಗೆ ಮಗು ಒಡನಾಡಿಯೋ ಮಗುವಿಗೆ ಅಜ್ಜಿ ಒಡನಾಡಿಯೋ ತಿಳಿಯುವುದೇ ಕಠಿಣ. ಅವರು ಸರಿಯರೂ ಅಲ್ಲ; ಓರಗೆಯವರೂ ಅಲ್ಲ. ಆದರೆ ಹದಿನಾರಾಣೆ ಒಡನಾಡಿಗಳು ಮಾತ್ರ ಅಹುದು. ಅಜ್ಜಿ ಬಾಗಿ ನಡೆಯುತ್ತಾಳೆ. ಮಗುವಿಗೆ ನಿಲ್ಲಲಿಕ್ಕೇ ಬರುವುದಿಲ್ಲ. ಆಕೆಯ ಬಾಯಲ್ಲಿ ಹಲ್ಲು ಉಳಿದಿರುವುದಿಲ್ಲ. ಈತನ ಬಾಯಲ್ಲಿ ಹಲ್ಲು ಮೊಳೆದಿರುವುದಿಲ್ಲ. ಆಕೆ ಮಂದಗಣ್ಣಿನ ಸೂನ್ನಿ. ಈತ ಕಣ್ಣು ತೆರೆಯದ ಕುನ್ನಿ. ಮೂರು ಕಾಲಲ್ಲಿ ನಡೆಯುವ ವಿಚಿತ್ರ ಪ್ರಾಣಿ ಒಂದು; ನಾಲ್ಕು ಕಾಲಲ್ಲಿ ಅಂಬೆಗಾಲಿಡುವ ಸೋಜಿಗದ ಪಶು ಇನ್ನೊಂದು. ಮಗುವಿಗೆ ಇಟ್ಟ ಹೆಸರು, ಅಜ್ಜಿಯನ್ನು ಅಗಲಿ ಹೋದ ಅಜ್ಜನದು. ಕೈ ಹಿಡಿದವನೆ ಕೈಬಿಟ್ಟು ಹೋಗಿ, ಮಗನ ಹೊಟ್ಟೆಯಿಂದ ಮೊಮ್ಮಗನಾಗಿ ಹುಟ್ಟಿ ಬಂದು, ಬಚ್ಚಬಾಯಿಂದ ಅಜ್ಜಿಯನ್ನು ನೋಡಿ ನಗತೊಡಗಿದರೆ, ಅಜ್ಜಿ ತಿಳಿದುಕೂಂಡು ಬಿಡುತ್ತಾಳೆ-ಆತನೇ ಈತನೆಂದು, ಆನಂದ ಬಾಷ್ಪವು ಗೊತ್ತಾಗದಂತೆ ಹನಿಯುತ್ತದೆ. ಬಹುದಿನಗಳ ತರ್ವಾಯದ ಈ ಕೂಡಿಕೆಯು ಮಿಡಿಯಾಗಿ, ಸಹವಾಸದ ಪಾಡಿನಿಂದ ಸಖ್ಯದ ಫಲವಾಗಿ ಪರಿಣಮಿಸುವುದಕ್ಕೆ ಕಥನವೇ ಮಂತ್ರವಾಗುತ್ತದೆ; ಕಥೆಯೇ ತಂತ್ರವಾಗುತ್ತದೆ.