ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಉದ್ದನ್ನವರ ಮುಂದೆ ಕೀರ್ತನ

ಊರಿಗೆ ಬ೦ದ ಪ್ರಖ್ಯಾತ ಕೀರ್ತನಕಾರನೊಬ್ಬನ ಕೀರ್ತನ ಮಾಡಿಸಬೇಕೆಂದು, ಪ್ರಮುಖರು ಎತ್ತುಗಡೆ ನಡೆಯಿಸಿದರು. ಕೀರ್ತನಕಾರನು ಮೊದಲೇ ಸೂಚಿಸಿದಂತೆ ಶ್ರೋತೃವೃಂದದಲ್ಲಿ ಕುಳಿತ ಗಿಡ್ಡಗಿಡ್ಡ ಜನರನ್ನೆಲ್ಲ ಎಬ್ಬಿಸಿ ಕಳಿಸಲಾಗಿತ್ತು. ಕುಳಿತವರೆಲ್ಲರೂ ಉದ್ದನ್ನವರೇ ಆಗಿದ್ದಾರೆಂಬ ಭರವಸೆಯಾದ ಬಳಿಕ ಕೀರ್ತನಕಾರನು ತನ್ನ ಅಮೋಘವಾಣಿಯಿಂದ ಕೀರ್ತನ ಹೇಳಲು ಪ್ರಾರಂಭಿಸಿದನು.

ಸ್ತೋತ್ರವಾಯಿತು. ಉಪೋದ್ಘಾತ ಮುಗಿಯಿತು. ಮುಖ್ಯಕಥೆ ಮುಗುಳಿ ಮುಂದುವರೆಯಿತು. ಅಷ್ಟರಲ್ಲಿ ಸಂದರ್ಭಾನುಸಾರವಾಗಿ ಒಂದು ಅಡ್ಡಕತೆಯನ್ನು ಹೇಳುವದಕ್ಕೆ ಮೊದಲು ಮಾಡಿದನು ಕೀರ್ತನಕಾರನು. ಅದು ಏನೆಂದರೆ-

"ಒಮ್ಮೆ ತಿಪ್ಪೆಯಲ್ಲಿ ಬಿದ್ದ ಪತ್ರಾವಳಿಗೂ ಮಣ್ಣು ಹೆಂಟೆಗೂ ಮಾತುಕತೆ ನಡೆಯಿತು. ಪತ್ರಾವಳಿ ಅ೦ದಿತು — 'ಹೆಂಟೆಣ್ಣ ಮಳೆಗಾಲ ಆರಂಭವಾಗುವಂತೆ ತೋರುತ್ತದೆ. ಗಾಳಿ-ಮಳೆಗಳು ನಾಮುಂದೆ ನಾಮುಂದೆ ಎನ್ನುತ್ತ ಮೈ ಮೇಲೆ ದಾಳಿ ಮಾಡುವವು. ಅಂಥ ಸಂದರ್ಭದಲ್ಲಿ ನಾವು ಬದುಕುವ ಬಗೆಯೇನು? ಗಾಳಿ ಬಿರುಸಾಗಿ ಬೀಸಿದರೆ ನಾನು ಹಾರಿಹೋಗುತ್ತೇನೆ ಎಲ್ಲಿಯೋ. ಮರಮಳೆಹೊಡೆಯ ಹತ್ತಿದರೆ ನೀನು ಕರಗಿಹೋಗುತ್ತೀ. ಏನು ಉಪಾಯ ಇದಕ್ಕೆ ?'

ಅಷ್ಟರಲ್ಲಿ ಶ್ರೋತೃವೃಂದದಿ೦ದ ಒಂದು ಮಾತು ಕೇಳಿಬಂದಿತು — ಗಾಳಿ ಮಳೆ ಎರಡೂ ಏಕಕಾಲಕ್ಕೆ ಕೂಡಿಕೊಂಡು ಬಂದರೆ ಹೇಗೆ ಮಾಡುವುದು ?

ಆ ಅಡ್ಡ ಪ್ರಶ್ನೆಯನ್ನು ಕೇಳಿ ಕೀರ್ತನಕಾರನಿಗೆ ದಿಗಿಲಾಯಿತು. ಕಕ್ಕಾವಿಕ್ಕಿಯೇ ಆಗಿ ನಿಂತನು. ಊರ ಪ್ರಮುಖರನ್ನು ಹತ್ತಿರ ಕರೆದು ಕಿವಿಯಲ್ಲಿ ಹೇಳಿದನು "ಶ್ರೋತೃವರ್ಗದಲ್ಲಿ ಇನ್ನೊಬ್ಬ ಗಿಡ್ಡನು ಉಳಿದುಕೊಂಡಿದ್ದಾನೆ. ಅವನನ್ನು ಎಬ್ಬಿಸಿ ಕಳಿಸಿರಿ. ಇಲ್ಲದಿದ್ದರೆ ಕೀರ್ತನೆ ಮುಂದೆ ಸಾಗುವದಿಲ್ಲ?"

ಜನರಲ್ಲಿ ಕಣ್ಣುತಪ್ಪಿಸಿ ಕುಳಿತ ಆ ಗಿಡ್ಡನನ್ನು ಎಬ್ಬಿಸಿ ಕಳಿಸಿದ ಬಳಿಕ, ಕೀರ್ತನವು ತಡೆಯಿಲ್ಲದೆ ಸಾಗತೊಡಗಿತು. ಉದ್ದನ್ನವರ ಮುಂದೆಯೇ ಅವನ ಕೀರ್ತನ. ಯಾಕಂದರೆ — ಉದ್ದನ್ನವರಿಗೆ ಬುದ್ಧಿ ಕಡಿಮೆಯಂತೆ.