ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪
ಜನಪದ ಕಥೆಗಳು

"ಹಾಗಾದರೆ ಈ ಎಲ್ಲ ಮಕ್ಕಳ ಕೈಯಲ್ಲಿ ತುತ್ತುರೊಟ್ಟಿಯನ್ನಾದರೂ ಕೊಡು" ಎಂದು ವಿನಯಿಸಿದಳು.

"ತುತ್ತುರೊಟ್ಟಿ ಕೇಳಲು ಭಿಕ್ಷೆಗೆ ಬಂದಿರುವೆಯಾ?" ಎಂಬ ಉತ್ತರವನ್ನು ಪಡೆದು, ಅಷ್ಟೆಲ್ಲ ಮಕ್ಕಳನ್ನು ಕರೆದುಕೊಂಡು ಅಳುತ್ತ ಕರೆಯುತ್ತ ತನ್ನ ಮನೆಗೆ ಹೋದಳು.

ಅವರಲ್ಲಿದ್ದ ಬೆಲೆಯ ವಸ್ತುವೆಂದರೆ ಆಕೆಯ ಕೊರಳಲ್ಲಿದ್ದ ತಾಳಿ ಅಂದರೆ ಮಂಗಲ ಸೂತ್ರ. ಅದನ್ನು ತೆಗೆದುಕೊಂಡು ತಮ್ಮನ ಹೆಂಡತಿ ಅಂಗಡಿಗೆ ಹೋದಳು. ಅಂಗಡಿಯವನಿಗೆ ಅದ್ನ ಅಕ್ಕಿಯನ್ನೂ ದುಡ್ಡಿನ ವಿಷವನ್ನೂ ಕೊಡಬೇಕೆಂದು ಕೇಳಿದಳು.

"ಅದ್ನ‍‍‍‍‍‍‍‍‍‍ ಅಕ್ಕಿ ಯಾರಿಗೆ, ದುಡ್ಡಿನ ವಿಷ ಯಾತಕ್ಕೆ" ಎಂದು ಅಂಗಡಿಯವನು ಕೇಳಲು, "ಅದ್ನ ಅಕ್ಕಿ ಮಕ್ಕಳಿಗೆ, ದುಡ್ಡಿನ ವಿಷ ಹೆಗ್ಗಣಕೆ" ಎಂದು ಸುಳ್ಳು ಹೇಳಿದಳು.

ಅಂಗಡಿಯಿಂದ ಅಕ್ಕಿಯನ್ನು ತಂದು ಅನ್ನಕ್ಕಿಟ್ಟಳು. ಅದು ಕುದಿಯುತ್ತಿರುವಾಗಲೇ ಅದರಲ್ಲಿ ಅ ದುಡ್ಡಿನ ವಿಷವನ್ನೂ ಸುರಿದಳು. ಮರುಕ್ಷಣದಲ್ಲಿಯೇ ಅನ್ನವು ಸಿದ್ಧವಾಯಿತು.

ಎಂಟುಜನ ಮಕ್ಕಳಲ್ಲಿ ನೀಲವ್ವ-ನಿಂಬೆವ್ವನಿಗಾಗಿ ಒಂದೆಡೆ, ಗಂಗವ್ವಗೌರವ್ವನಿಗಾಗಿ ಒಂದೆಡೆ ಬಡಿಸಿದಳು. ಭೀಮಣ್ಣ-ಕಾಮಣ್ಣ ಇವರಿಗೊಂದು, ರಾಮ-ಲಕ್ಷುಮಣ್ಣ ಇವರಿಗೊಂದು ಎಡೆ ಸಿದ್ದವಾದವು. ಗಂಡಹೆಂಡಿರ ನಡುವೆ ಒಂದೆಡೆ ಬಡಿಸಲಾಯಿತು. ಎಲ್ಲರದೂ ಊಟವಾಯಿತು. ಇನ್ನು ಮಲಗಿಕೊಳ್ಳುವುದು.

ತನ್ನ ಬಲಕ್ಕೆ ನೀಲವ್ವ-ನಿಂಬವ್ವರನ್ನು, ಎಡಕ್ಕೆ ಗಂಗವ್ವ-ಗೌರವ್ವರನ್ನು ಮಲಗಿಸಿದಳು. ರಾಮಣ್ಣ-ಲಕ್ಷಮಣ್ಣರನ್ನು ಗಂಡನ ಬಲಕ್ಕೆ, ಭೀಮಣ್ಣಕಾಮಣ್ಣರನ್ನು ಗಂಡನ ಎಡಕ್ಕೆ ಮಲಗಿಸಿದಳು. ತಮಗಾಗಿ ನಟ್ಟುನಡುವೆ ಹಾಸಿದಳು.

ಮಲಗುವ ಮುಂಚೆ ತಲೆಬಾಗಿಲ ಬಳಿಗೆ ಹೋಗಿ ಮನದಲ್ಲಿ ಅಂದುಕೊಂಡಳು—"ಅಕ್ಕರೆಯ ಅಣ್ಣನು ಮಲ್ಲಾಡದೇಶಕ್ಕೆ ಹೋಗಿದ್ದಾನೆ. ದಿಕ್ಕುಗೇಡಿ ಈ ಬರ ನಮ್ಮ ಮಕ್ಕಳ ಸಲುವಾಗಿಯೇ ಬಂದಿತೆ? ರಾಜ್ಯಕ್ಕೆ ಹೊರತಾದ ಈ ಬರ ನಮ್ಮ ರಾಯರ ಸಲುವಾಗಿಯೇ ಬಂದಿತೆ?"

ಮಲ್ಲಾಡಕ್ಕೆ ಹೋದ ಅಣ್ಣನು ಮರಳಿ ಬಂದವನೇ ತಾಯಿಗೆ ಕೇಳುತ್ತಾನೆ

"ಅವ್ವಾ, ತಂಗೆಮ್ಮನ ಸುದ್ದಿಯೇನು?"