ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡಿದೊಂದು ಆಗಿದ್ದೊಂದು


ಹೀಗೆ ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿಗೆ ಸೊಸೆಯೂ ಬಂದಿದ್ದಳು. ವಾಡಿಕೆಯಂತೆ ಅತ್ತೆ ಸೊಸೆಯರಲ್ಲಿ ವಿರಸಕ್ಕಾರಂಭವಾಗಿ ಕದನವಾಗತೊಡಗಿದವು. ಕದನದ ಪರಿಣಾಮದಿಂದ ಕುನಸುಹುಟ್ಟಿಕೊಂಡಿತು ಪರಸ್ಪರರಲ್ಲಿ. ಎಂಥದೋ ಒಂದು ಉಪಾಯದಿಂದ ಅತ್ತೆಯನ್ನು ಇಲ್ಲದಂತಾಗಿಸಬೇಕೆಂಬ ಹಂಚಿಕೆಯನ್ನು ಸೊಸೆ ಹುಡುಕ ತೊಡಗಿದಳು. ಅದಕ್ಕೆ ಗಂಡನ ಸಹಾಯವೂ ಸಕಾಲದಲ್ಲಿ ದೊರೆಯುವಂತೆ ಹೇಳಿದ್ದಳು.

ರಾತ್ರಿ ಮಲಗಿರುವಾಗ ಅತ್ತೆಯನ್ನು ಕಟ್ಟಿ ಒಯ್ದು ಹೊಳೆಯಲ್ಲಿ ಒಗೆಯಬೇಕೆಂದು ನಿರ್ಧರಿಸಿ ಗಂಡನಿಗೆ ಸಿದ್ಧನಾಗಿರಲು ತಿಳಿಸಿದಳು.

ಗಂಡನು ಹೆಂಡತಿಯ ಕೆಲಸಕ್ಕೆ ಸಮ್ಮತಿಸಿ ಅದನ್ನು ನಿರ್ವಹಿಸಲು ಸಿದ್ಧನಾದರೂ ಆ ವಿಷಯವನ್ನು ತಾಯಿಗೆ ಹೇಳಲು ಮರೆಯಲಿಲ್ಲ.

ಅದೇ ಸಂಧರ್ಭದಲ್ಲಿ ಮಗಳನ್ನು ಕಂಡುಹೋಗಲೆಂದು ಸೊಸೆಯ ತಾಯಿ ಆ ಊರಿಗೆ ಬಂದಳು. ಮನೆಗೆ ಬಂದ ಬೀಗತಿಯನ್ನು ತಾಯಿ ಆದರದಿಂದ ಬರಮಾಡಿಕೊಂಡಳು. ಎಲ್ಲರೂ ಕೂಡಿ ಉಂಡು ನಕ್ಕರು, ಕೆಲೆದರು. ರಾತ್ರಿ ಬಹಳ ಆಯಿತಂದು ತಂತಮ್ಮ ಹಾಸಿಗೆ ಹಾಕಿಕೊಂಡರು.

ಬೀಗತಿಯರು ಒಂದೇ ಕಡೆ ಹಾಸಿಗೆ ಹಾಕಿದರು. ತಂತಮ್ಮ ಹೊದಿಕೆ ಹೊತ್ತು ಕೆಲಹೊತ್ತು ಮಾತಾಡುತ್ತ ಮಲಗಿದರು. ಬಳಿಕ ಅವರಿಗೆ ನಿದ್ದೆ ಹತ್ತಿತು. ಗಂಡ ಹೆಂಡಿರು ನಿತ್ಯದಂತೆ ತಮ್ಮ ಕೋಣೆಗೆ ತರಳಿದರು ಮಲಗಲಿಕ್ಕೆ.

ಸೊಸೆ ಯಾವುದೊ ನೆವದಿಂದ ಹೊರ ಬಂದು, ತನ್ನ ತಾಯಿ-ಅತ್ತೆಯರಿಗೆ ನಿದ್ದೆ ಹತ್ತಿದೆಯೆಂದು ಬಗೆದು, ಅತ್ತೆಯ ಕಾಲಬೆರಳಿಗೆ ಕಂಬಳಿಯ ಕರೆಯನ್ನು ಕಟ್ಟಿದಳು. ಅಂದಿನ ರಾತ್ರಿಯಲ್ಲಿಯೇ ಹೊಳೆ ಕಾಣಿಸಿ ಬರಬೇಕಾಗಿತ್ತು. ಇಬ್ಬರು ಮುದುಕಿಯರು ಒತಟ್ಟಿಗೆ ಮಲಗಿದಾಗ, ಗಂಡನು ತನ್ನ ತಾಯನ್ನು ಸಹಜವಾಗಿ ಗುರುತಿಸಲೆಂದು ಹಾಗೆ ಮಾಡಿ ಗಂಡನಿಗೆ ತಿಳಿಸಿದಳು.

ತನ್ನನ್ನು ಎಂದಾದರೊಮ್ಮೆ ಹೊತ್ತೊಯ್ಯುವರೆಂಬ ಎದೆಗುದಿಯಲ್ಲಿ ಆತನ ತಾಯಿಗೆ ನಿದ್ದೆ ಹತ್ತಿರಲಿಲ್ಲ. ಕಾಲಕಿರಿಬೆರಳಿಗೆ ಸೊಸೆ ಕಂಬಳಿಯ ಕರೆ ಕಟ್ಟುವುದು