ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
xvii

ಅಲ್ಲಿ ಪಶುಗಳು ಮಾತಾಡುವವು. ಪಕ್ಷಿಗಳು ಓಲೆಕಾರನ ಕೆಲಸ ಮಾಡುವವು. ಸಿಂಹ ಹುಲಿಗಳಂಥ ಹಿಂಸ್ರ ಪಶುಗಳು ಪರೋಪಕಾರ ಮಾಡುವುವು. ಇಲಿ ಇಣಚಿಗಳು ಪ್ರತ್ಯುಪಕಾರ ಮಾಡುವುವು. ಅಳಿಲು ಸೇವೆ ಶ್ರೀರಾಮನಂಥ ಅವತಾರಿ ಪುರುಷನಿಗೂ ಸಂದಿದೆ. ಹಾವು ಚೇಳುಗಳೂ ಗೆಳೆಯರಾಗಬಲ್ಲವು. ಶಿವನು ಇಳಿದು ಬರುವನು. ರತಿಯು ಹೊಟ್ಟೆಯಲ್ಲಿ ಹುಟ್ಟುವಳು. ಇಂದ್ರನ ಐರಾವತವಾಗಲಿ, ವಸಿಷ್ಠರ ಕಾಮಧೇನುವಾಗಲಿ ಕೊಟ್ಟಿಗೆಯ ಪಶುವಾಗಿ ನಿಲ್ಲುವುದು ಅರಿದಲ್ಲ. ಕೃಷ್ಣನ ಕೊಳಲು, ಶಿವನ ಡಮರು, ಸರಸ್ವತಿಯ ನವಿಲು, ವಿಷ್ಣುವಿನ ಗರುಡ ಅವು ನಮ್ಮ ನಿಮ್ಮ ಮನೆಯ ವಸ್ತುಗಳನಿಸಲು ತಡವಾಗದು. ಗಾಳಿಯಲ್ಲಿ ಈಸುವ ಕೂಸು, ನೀರಮೇಲೆ ನಡೆಯವ ನಲ್ಲ, ಏನು ತಿಂದರೂ ತುಂಬದ ಹೊಟ್ಟೆ, ಎಷ್ಟು ತಂದರೂ ಸರಿಯದ ಬಂಗಾರ, ತಲೆಯಮೇಲೆ ಕೈಯಿಟ್ಟರೆ ಬರುವ ಸವೆಯದ ಸೌಭಾಗ್ಯ, ನಾಲಗೆಯ ಮೇಲೆ ಬರೆದರೆ ಹರಿಗಡಿಯದೆ ವಿದ್ಯೆ ಇವೆಲ್ಲ ನಮ್ಮ ಕಥಾ ಸಾಮ್ರಾಜ್ಯದೊಳಗಿನ ಅದ್ಭುತಗಳು. ಏಳುಮಲ್ಲಿಗೆ ಹೂವಿನ ತೂಕದ ತರುಣಿಯನ್ನು, ನಕ್ಕರೆ ಸಕ್ಕರೆ ಚೆಲ್ಲುವ ಚೆಲುವೆಯನ್ನು, ಕಣ್ಣರಳಿಸಿದರೆ ತಂಬೆಳಕು ಸೂಸುವ ಸುಭಗೆಯನ್ನು, ಹೆಜ್ಜೆಹೆಜ್ಜೆಗೂ ಕುಂಕುಮ ಮೂಡಿಸು ಮಾಟಗಾತಿಯನ್ನು ನಮ್ಮ ಜಾನಪದ ಕಥೆಗಳಲ್ಲಿ ಕಾಣಬಹುದು. ಸಾವಿರ ಕಣ್ಣಿನ ಮನುಷ್ಯ, ಇಪ್ಪತ್ತು ಕಾಲಿನ ನಾಯಿ, ಹಾಡುವ ಕಲ್ಲು, ನಗುವ ಗುಡ್ಡ, ಬೆಳಕು ಹುಟ್ಟಿಸುವ ಗಡ್ಡ ಮೊದಲಾದ ವಿಚಿತ್ರಗಳೂ ಕಥಾ ಸಾಮ್ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಸ್ಯದ ಕಥೆಯೇ ಇರಲಿ, ನೀತಿಯ ಕಥೆಯೇ ಇರಲಿ, ಕಥನವೇ ಪ್ರಯೋಜನವಾದ ಕಥೆಯೇ ಇರಲಿ. ಯಾವ ಗುಂಪಿನೊಳಗಿನ ಕಥೆಯಲ್ಲಿಯೂ ನಾವು ವಿಚಿತ್ರಕತರವಾದ ಅತ್ಯಗಾಧವಾದ ಅದ್ಭುತವನ್ನು ಕಾಣಬಲ್ಲೆವು; ಹೇಳಬಲ್ಲೆವು; ಮೂಕರಾಗಬಲ್ಲೆವು.

ಉತ್ತರಕರ್ನಾಟಕದ ಜನಪದ ಕಥೆಗಳು ಮಾತ್ರ ಇಲ್ಲಿ ಸಂಗ್ರಹಿತವಾಗಿವೆ. ಇಲ್ಲಿ ಬಂದ ಅನೇಕ ಕಥೆಗಳು ದಕ್ಷಿಣ ಕರ್ನಾಟಕದಲ್ಲಿ ತುಸು ಪಾಠಾಂತರ ಗೊಂಡಾದರೂ ಸಿಕ್ಕೇ ಸಿಗುತ್ತವೆ. ದಕ್ಷಿಣ ಕರ್ನಾಟಕದವರೆಂದು ಹೇಳಲಾಗುವ ಅವೆಷ್ಟೋ ಕಥೆಗಳು ಪಾತ್ರಗಳ ಹೆಸರಿನಲ್ಲಿ ಮಾತ್ರ ಬೇರ್ಪಟ್ಟು ನಮ್ಮಲ್ಲಿ ಕಾಣಸಿಗುತ್ತವೆ. ಉದಾಹರಣಾರ್ಥವಾಗಿ ೧೯೭೦ನೇ ದಿಶಂಬರ ತಿಂಗಳ “ಪುಸ್ತಕ ಪ್ರಪಂಚ”ದಲ್ಲಿ ಶಿವಮೊಗ್ಗೆ ಜಿಲ್ಲೆಯವರೂಬ್ವರು ಹೇಳಿದ ಕಥೆಯನ್ನು ಆಧರಿಸಿ ಸಂಗ್ರಹಿಸಿದ “ಸೋಮರಾಯ ಮತ್ತು ಭೀಮರಾಯ" ಎಂಬ ಕಥೆಯನ್ನು ಓದುತ್ತಲೆ ನೆನಪಿಗೆ ಬಂತು-ನಾನು ೫೫ ವರ್ಷಗಳ ಹಿಂದೆ ನಮ್ಮೂರಿನ ಕಂಚುಗಾರನೊಬ್ಬ ಹೇಳಿದ ಕಥೆಯೇ ಅದಾಗಿತ್ತು-"ಗರಡಿಯಗೆಳೆಯರು" ಆದರೆ ಅದರಲ್ಲಿ ಬಂದ ಪಾತ್ರಗಳ ಹೆಸರು ಮಾತ್ರ ಬೇರೆಯಾಗಿದ್ದವು. ಅದರಂತೆ ಗುಲಬರ್ಗಾ-ಬೀದರ್ ಜಿಲ್ಲೆಗಳಲ್ಲಿ ಪ್ರಚಲಿತವಿದ್ದ ಕೆಲವು ಕಥೆಗಳು ವಿಜಾಪುರ-ಬೆಳಗಾವಿ ಜಿಲ್ಲೆಗಳಲ್ಲಿಯೂ ಕೇಳಸಿಗುತ್ತವೆ.