ನಮ್ಮವರ ನೆತ್ತರದ ಅಣುಅಣುವಿನಲ್ಲಿಯೂ ಹುದುಗಿದೆ.
ಶ್ರೀ ರಾಮಕೃಷ್ಣ ಪರಮಹಂಸರು ಇಂದಿನ ಕಾಲದ ಜನರಿಗೆ ಬೋಧಿಸಿದಂತೆ ಅಂದಿನವರು ಒಂದು ಕೈಯಿಂದ ದೇವನನ್ನು ಗಟ್ಟಿಯಾಗಿ ಹಿಡಿದು, ಇನ್ನೊಂದು ಕೈಯಿಂದ ಸಂಸಾರದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ದೇವನ ಪ್ರೀತ್ಯರ್ಥವಾಗಿ ಬದುಕುತ್ತಿದ್ದರು; ಅವರ ಸಂತೋಷಕ್ಕಾಗಿ ಸೊಗಸಾಗಿ ಬದುಕುತ್ತಿದ್ದರು. ಅವರ ಬುದ್ಧಿ ಪ್ರಾಣ ದೇಹಗಳು ಸತ್ಯ ಶಿವ ಸುಂದರಗಳಿಗೆ ಆಗರವಾಗುವಂತೆ ವೈಯಕ್ತಿಕ ಸಾಮೂಹಿಕ ಪ್ರಯತ್ನಗಳು ಸ್ವಾಭಾವಿಕವಾಗಿಯೇ ನಡೆಯುತ್ತಿದ್ದವು.
ಕೇಳಿದ ಕಥೆಯನ್ನಾಗಲಿ, ಕಲಿತ ಹಾಡನ್ನಾಗಲಿ ಇನ್ನೊಬ್ಬರಿಗೆ ಕೇಳಿಸುತ್ತ ವಿಕಸಿತ ಜೀವನಕ್ಕೆ ಆಸ್ಪದ ಮಾಡಿಕೊಡುವುದೂ ಒಂದು ಸದ್ಧರ್ಮವೆಂದೇ ನಮ್ಮವರು ಬಗೆದಿದ್ದರು. ಅದನ್ನು ಅಲ್ಲಗೆಳೆದೋ ಒಲ್ಲಗಳೆದೋ ಬಂದ ಕಥೆ ಹಾಡು ಬಯತಿರಿಸಿದರೆ ಅವು ತಾವಾಗಿಯೇ ಕಾಲ್ದೆಗೆಯುವವೆಂದು ನಮ್ಮವರ ಗ್ರಹಿಕೆ. ಕಥೆ ಕಾಲ್ಮರೆಯಾಗಿ ಮೆಟ್ಟುಗಟ್ಟೆಯ ಬಳಿ ಕುಳಿತಿತು. ಹಾಡು ಮೇಲಂಗಿಯಾಗಿ ಗೂಟಕ್ಕೆ ನೇತು ಬಿದ್ದಿತು. ಮನೆಯೊಡತಿಗೆ ಗಂಡ ಕೇಳಿದನು-“ಯಾರು ಬಂದಿದ್ದಾರೆ?”
“ಯಾರೂ ಬಂದಿಲ್ಲ” ಎಂದಳು ಗೃಹಿಣಿ. ಗಂಡನಿಗೆ ಸಂಶಯ ಬಾಧಿಸಿತು. ಹೆಂಡತಿಯನ್ನೂ ಅದು ಬಾಧಿಸದೆ ಬಿಡಲಿಲ್ಲ. ಗಂಡನು ರಾತ್ರಿ ಹನುಮಂತದೇವರ ಗುಡಿಗೆ ನಿತ್ಯದಂತೆ ಮಲಗಲು ಹೋದಾಗ, ಅಲ್ಲಿ ಊರದೀಪಗಳೆಲ್ಲ ಬಂದು ಬಂದು ನೆರೆದವು. ತಡವೇಕಾಯಿತಂದು ಆ ಗೃಹಿಣಿಯ ಮನೆಯ ದೀಪಕ್ಕೆ ಉಳಿದ ದೀಪಗಳು ಕೇಳಿದವು. ಅದಕ್ಕೆ ಮರುನುಡಿದ ತನ್ನ ಮನೆಯ ದೀಪದ ಮಾತಿನಿಂದ, ಆತನಿಗೆ ಕಾಲ್ಕರೆ-ಕೋಟುಗಳ ರಹಸ್ಯವು ನಿಚ್ಚಳವಾಯಿತು, ಹೆಂಡತಿಯ ಬಗೆಗೆ ಮೂಡಿದ ಸಂಶಯ ದೂರವಾಯಿತು. ಬರುವ ಹಾಡು-ಕಥೆಗಳನ್ನು ಹೆರರಿಗೆ ಹೇಳಿ ಸಾರ್ಥಕಗೊಳಿಸದಿದ್ದರೆ ಬದುಕಿನಲ್ಲಿ ಅನಿಷ್ಟಗಳು ನುಸುಳುವವೆಂದು ಹೇಳಿದಂತಾಯಿತು. ಆದ್ದರಿಂದ ಕಥೆಗಳನ್ನು ಹೇಳುವದಕ್ಕೊಂದು ಪ್ರಯೋಜನವಿದ್ದಂತೆ, ಕೇಳುವದಕ್ಕೂ ಒಂದು ಪ್ರಯೋಜನವಿಲ್ಲದಿರಲಾರದು.
ಈ ಜಿನ ಕಥೆಯನು ಕೇಳಿದವರ ಪಾಪ-
ಬೀಜ ನಿರ್ನಾಶನವಹದು ॥
ತೇಜವಹುದು ಪುಣ್ಯವಹುದು, ಮುಂದೊಲಿದಪ
ರಾಜಿತೇಶ್ವರನ ಕಾಣುವರು ॥
ರತ್ನಾಕರವರ್ಣಿಯು ಜಿನಕಥೆಯ ಸಲುವಾಗಿ ಹೇಳಿದ್ದನ್ನೇ ನಾವು ಜನಕಥೆಯ ಸಲುವಾಗಿ ಹೇಳಬಹುದಾಗಿದೆ. ಪಾಪಬೀಜವನ್ನು ನಾಶಗೊಳಿಸಿ, ತೇಜಸ್ಸನ್ನೆರೆದು, ಅ-ಪರಾಜಿತೇಶ್ವರನನ್ನು ಕಾಣಿಸಬಲ್ಲ ಜನಕಥೆಯ ಸಂಗ್ರಹಕಾರ್ಯವು ನಾಡಿನ ಮುನ್ನಡೆಗೆ ಅತ್ಯಾವಶ್ಯಕವಾದ ಸಾಧನವಾಗಿದೆ.