“ಪೂಜೆಮಾಡಿ ಐದು ತಿಂಗಳಾದವು. ದೇವರಿಗೆ ಹರಕೆ ಹೊತ್ತಿದ್ದೇನೆ. ನನ್ನನ್ನು ಒಳಗೆ ಬಿಡಿರಿ” ಎಂದು ದುಂಬಾಲ ಬೀಳುತ್ತಾನೆ. ಆದ್ದರಿಂದ ಒಳಗೆ ಹೋಗಲು ಅಪ್ಪಣೆ ಸಿಕ್ಕಿತು.
ರಾಜನ ಮಗ ಒಳಗೆ ಕುಳಿತಿದ್ದನು. ಈಗ ಪ್ರಧಾನಿಯ ಮಗನೂ ಒಳಗೆ ಹೋಗಿ ಅವನಿಗೆ ಜತೆಯಾದನು. ಪ್ರಧಾನಿಯ ಮಗನು ಉಟ್ಟುಕೊಂಡ ಸೀರೆಯನ್ನೇ ತಾನುಟ್ಟುಕೊ೦ಡು ಮೈನಾವತಿ ಅಲ್ಲಿಂದ ಹೊರಬಿದ್ದಳು. ಅವರಿಬ್ಬರೂ ಜೊತೆಗಾರರು ಗುಡಿಯಲ್ಲಿ ಸ್ವಸ್ಥವಾಗಿ ನಿದ್ದೆ ಮಾಡಿದರು.
ಬೆಳಗಾಗುತ್ತಲೆ ಅವರೆದ್ದು ಹೊರಹೊರಟರು. ಓಲೆಕಾರ ಹಾಗೂ ಉಳಿದಜನ ಅವರನ್ನು ಕಣ್ಣುತೆರೆದು ನೋಡಿದರು. ಒಳಗೆ ಹೋಗಿ ತಪಾಸು ಮಾಡಿದರೆ ಅಲ್ಲಿ ಯಾವ ಹೆಣ್ಣುಮಗಳೂ ಇರಲಿಲ್ಲ. ಎಲ್ಲರೂ ಓಲೆಕಾರನಿಗೆ ಸಿಟ್ಟುಮಾಡಿ ಹೋಗಿಬಿಟ್ಟರು.
ಆ ಉಭಯಕುಮಾರರು ಹೂಗಾರ ಮುದುಕಿಯ ಮನೆಗೆ ಹೋಗಿ ಜಳಕ ಊಟ ಮುಗಿಸಿ ವಿಶ್ರಾಂತಿ ಮಾಡಿದರು.
ಪ್ರಧಾನಿಯ ಮಗನು ರಾಜನ ಮಗನಿಗೆ ಒಂದು ಒಳ್ಳೆಯ ಸೀರೆ ಉಡಿಸಿ ಮೈನಾವತಿಯ ಗಂಡನಮನೆಗೆ ಕರಕೊಂಡು ಹೋದನು. ಆ ಸಂದರ್ಭದಲ್ಲಿ ಮೈನಾವತಿಯ ಗಂಡನು ಊರಲ್ಲಿರಲಿಲ್ಲ. ಮುತ್ತುರತ್ನಗಳ ವ್ಯಾಪಾರಕ್ಕಾಗಿ ದೇಶ ಸಂಚಾರ ಹೋಗಿದ್ದನು. ಪ್ರಧಾನಿಯ ಮಗನು, ಮೈನಾವತಿಯ ಮಾವನಿಗೆ ಹೇಳಿದನು -
“ನನ್ನ ಸೊಸೆಯನ್ನು ನಿಮ್ಮ ಮನೆಯಲ್ಲಿ ಬಿಡುತ್ತೇನೆ. ಯಾಕೆಂದರೆ, ನನ್ನ ಸಾಮಾನುಗಳನ್ನೆಲ್ಲ ಕಳ್ಳರು ದೋಚಿಕೊಂಡು ಒಯ್ದಿದ್ದಾರೆ. ಈಗ ಸಹ ಅವರು ನನ್ನ ಬೆನ್ನು ಹತ್ತಿದ್ದಾರೆ. ದಯಮಾಡಿ ಕೆಲದಿನದ ಮಟ್ಟಿಗೆ ಈಕೆಯನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿರಿ.”
ಈ ಪ್ರಕಾರ ವೇಷದ ಸೊಸೆಯನ್ನು ಬಿಟ್ಟುಕೊಟ್ಟು ಪ್ರಧಾನಿಯ ಮಗನು ಹೋಗಿಬಿಡುತ್ತಾನೆ.
ರಾಜನಮಗ ಹಾಗೂ ಮೈನಾವತಿಯರ ಭೇಟಿ ಹೀಗೆ ಆಗುತ್ತದೆ. ಎಂಟು ಹತ್ತು ದಿನಗಳು ಕಳೆದ ಬಳಿಕ ಮೈನಾವತಿಯ ಗಂಡನು, ವ್ಯಾಪಾರ ತೀರಿಸಿಕೊಂಡು ಮನೆಗೆ ಬರುತ್ತಾನೆ. ಮನೆಯಲ್ಲಿರುವ ಹೊಸ ಹೆಣ್ಣು ಮಗಳನ್ನು ಕಂಡು ಅವಳ ಮೇಲೆ ಮನಸ್ಸು ಮಾಡುತ್ತಾನೆ. “ನಿನ್ನದು ಯಾವ ಊರು?” ಎಂದು, ಆಕೆಯ ಹತ್ತಿರಕ್ಕೆ ಹೋಗಿ ಕೇಳುತ್ತಾನೆ.