ಅದನ್ನು ಹೊರದೆಗೆದು ಕಣ್ಣಾಡಿಸಿದರೆ ಅದು ತನ್ನ ಗಂಡನದೇ ಪತ್ರವೆಂದು ತಿಳಿಯಿತು. ಬಿಚ್ಚಿ ಓದುತ್ತಾಳೆ — ಗಂಡನ ಇಡಿಯ ಕಥೆಯೇ ಅದರಲ್ಲಿದೆ.
ಮಾವನ ಮುಂದೆ ಗಂಡನ ಸಮಾಚಾರವನ್ನೇನೂ ಹೇಳದೆ, "ನಾಲ್ಕುದಿವಸ ತವರು ಮನೆಗೆ ಹೋಗಿ ಬರುತ್ತೇನೆ. ಅವರು ವ್ಯಾಪಾರಕ್ಕೆಂದೇ ಹೋಗಿದ್ದರಿಂದ ನಾಲ್ಕೆಂಟು ಹರದಾರಿ ಮುಂದಿನೂರಿಗೆ ಹೋಗಿದ್ದಾರು. ನಾಲ್ಕು ದಿನ ತಡೆದು ಬಂದಾರು. ಚಿ೦ತಿಸಬೇಡಿರಿ" ಎಂದು ಧೈರ್ಯ ಹೇಳಿ ತನ್ನ ತವರೂರಿಗೆ ತೆರಳಿದಳು.
ಸೊಸೆ ವ್ಯಾಪಾರಿಯ ವೇಷತೊಟ್ಟು ಕುಪ್ಪಸದ ಗಂಟುಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು ಆ ಪಾತ್ರದವಳಿರುವ ಪಟ್ಟಣಕ್ಕೆ ಹೋದಳು. ಸಮಯ ದೊರಕಿಸಿಕೊಂಡು ಪಾತ್ರದವಳ ಮನೆಗೆ ಹೋಗಿ ಜೂಜಿನಾಟದ ಕ್ರಮನಿಯಮಗಳನ್ನೆಲ್ಲ ಅರಿತುಕೊಂಡು ಆಟಕ್ಕೆ ಬರುವೆನೆಂದು ಹೇಳಿ ಬಂದನು ವೇಷಧಾರಿ. ಆ ಬಳಿಕ ಆಟಕ್ಕೆ ಬೇಕಾಗುವ ಪೂರ್ವ ಸಿದ್ಧತೆಯನ್ನೆಲ್ಲ ಒಳ್ಳೆಯ ಯುಕ್ತಿಯರಿತು ಮಾಡಿಕೊಂಡು, ಮೂರು ನಾಲ್ಕು ತಾಸು ರಾತ್ರಿಯಾಗುತ್ತಲೇ ವೇಷಧಾರಿ ಆಕೆಯ ಮನೆಗೆ ತೆರಳಿದನು.
ಆಟವು ಒಳ್ಳೆಯ ಭರಕ್ಕೆ ಬಂದಾಗ ವೇಷಧಾರಿಯು ತನ್ನ ಒಳ ಅಂಗಿಯ ಕಿಸೆಯಲ್ಲಿ ಆದುಮಿಟ್ಟುಕೊಂಡ ಎರಡು ಇಲಿಗಳನ್ನು ಪಾತ್ರದವಳಿಗೆ ಗೊತ್ತಾಗದಂತೆ ಹೊರತೆಗೆದು ಬಿಟ್ಟನು. ಅದನ್ನು ಕಂಡು ಹಣತಿಯನ್ನು ಹೊತ್ತು ಕುಳಿತ ಬೆಕ್ಕು ದೀಪವನ್ನು ಚೆಲ್ಲಿಕೊಟ್ಟು ಇಲಿಗಳ ಬೆನ್ನು ಹತ್ತಿ ಓಡಿತು. ಆ ಕಾರಣದಿಂದ ಪಾತ್ರದವಳು ಅ೦ದಿನ ಜೂಜಿನಾಟದಲ್ಲಿ ಸೋತು ತನ್ನಾಸ್ತಿಯನ್ನೆಲ್ಲ ಆ ಹೊಸ ವ್ಯಾಪಾರಿಗೆ ಒಪ್ಪಿಸಿದಳು.
ವೇಷಧಾರಿಯು, ಆಕೆಗೆ ಸೋತು ಸೆರೆಯಾಳಾಗಿ ಬಿದ್ದವರನ್ನೆಲ್ಲ ಕರೆಯಿಸಿ, ಆ ಗುಂಪಿನಲ್ಲಿ ತನ್ನ ಪತಿಯನ್ನು ಗುರುತಿಸಿ, ಆತನನ್ನುಳಿದು ಉಳಿದವರನ್ನೆಲ್ಲ ಬಿಡುಗಡೆ ಮಾಡಿ ಕಳಿಸಿದಳು. ಉಳಿದುಕೊಂಡ ಸೆರೆಯಾಳು ತನ್ನ ದುರ್ದೈವವಿನ್ನೂ ಹಿಂಗಿಲ್ಲವೆ೦ದು ತಿಳಿದನು. ಮರುದಿನ ಆ ಪಾತ್ರದವಳ ಆಸ್ತಿಯನ್ನೆಲ್ಲ ಗಾಡಿಗಳಲ್ಲಿ ಹೇರಿಸಿಕೊಂಡು ಉಳಿದ ಸೆರೆಯಾಳಿನ ಜೊತೆಗೂಡಿ ತನ್ನೂರ ಹಾದಿಹಿಡಿದನು.
ಅರ್ಧಧಾರಿ ನಡೆದು ಬ೦ದ ಬಳಿಕ ಆ ಸೆರೆಯಾಳಿನ ಕ್ಷೌರಮಾಡಿಸಿ ಉಡುತೊಡಲು ಹೊಸ ಅರಿವೆ ಕೊಟ್ಟನು. ತನ್ನ ವೇಷಬದಲಿಸಿ ಸೀರೆಯುಟ್ಟು ಕುಪ್ಪಸ ತೊಟ್ಟಿದ್ದರಿಂದ ಆತನು ಆಕೆಯನ್ನು ಗುರುತಿಸಿ ಹಿಗ್ಗಿದನೆಂದು ಹೇಳಬೇಕೆ?
ಮುಂದೆರಡು ದಿನ ದಾರಿಸಾಗಿದಾಗ ಅವರೂರು ಬಂತು. ಅವರ ಮನೆಯೂ ಬಂತು. ಮಾವನು ಮನೆಗೆ ಬಂದಾಗ ಸೊಸೆ ಮಗ ಇಬ್ಬರೂ ಕಾಣಿಸಿದರು.