ಹೆಂಡತಿಗೆ ಹೊಡೆಯಬೇಕೆನ್ನುವ ರಾಜ
ಇಬ್ಬರು ಗಂಡ ಹೆಂಡತಿ ಇದ್ದರು. ಅವರಿಗೆ ಒಬ್ಬಾಕೆ ಮಗಳು ಮಾತ್ರ ಇದ್ದಳು. ಅಪ್ಪ ಹೊಲಕ್ಕೆ ಹೋಗಿದ್ದಾನೆ; ತಾಯಿ ಹೊರಕ್ಕೆ ಹೋಗಿದ್ದಾಳೆ; ಮಗಳು ಹೊರಕಡಿಗೆ ಹೊರಟಳು. ಹಾದಿಯಲ್ಲೊಂದು ಮನೆ. ಮನೆಯಲ್ಲಿ ಗಂಡನಾದವನು ಹೆಂಡತಿಗೆ ಹೊಡೆಯುತ್ತಿದ್ದನು. ಮೂರುದಿನಕ್ಕೊಮ್ಮೆ ಗಂಡ ಯಾಕೆ ಹೊಡೆಯುತ್ತಾನೆ? "ಯಾರು ತಿಂತಾರವ್ವ ಹೀಂಗ ದಿನಾಲು ಏಟು. ಏನು ತಪ್ಪುಮಾಡ್ಯಾಳೋ ಯಾನೋ" ಎನ್ನುತ್ತಾಳೆ ಆ ಮಗಳು. ಅಷ್ಟರಲ್ಲಿ
ರಾಜ ಮತ್ತು ಪ್ರಧಾನಿ ಇಬ್ಬರೂ ವಾಯುಸೇವನೆಗೆ ಹೊರಟಿದ್ದರು. ಪ್ರಧಾನಿಯು ರಾಜನಿಗೆ ಸಲಹೆ ಕೊಡುತ್ತಾನೆ—"ಈ ಹೆಣ್ಣುಮಗಳು ಚಪಲ ಕಾಣಿಸುತ್ತಾಳೆ. ಇವಳನ್ನು ಮಾತಾಡಿಸಿ ನೋಡೋಣ."
ಆ ಹೆಣ್ಣು ಮಗಳಿಗೆ ರಾಜನು ಕೇಳುತ್ತಾನೆ—"ಮಗಾ, ನಿಮ್ಮಪ್ಪ ನಿಮ್ಮವ್ವ ಎಲ್ಲಿ ಹೋಗಿದ್ದಾರೆ?"
ಆಕೆ ಮರು ನುಡಿಯುತ್ತಾಳೆ—"ಅಪ್ಪ ಮುಳ್ಳಿನ ಗಿಡಕ್ಕೆ ಮುಳ್ಳುಹಚ್ಚಲು ಹೋಗಿದ್ದಾನೆ. ಖಂಡದೊಳಗಿನ ಖಂಡ ತೆಗೆಯಲು ಅವ್ವ ಹೋಗಿದ್ದಾಳೆ."
"ಯಾವಾಗ ಬರುತ್ತಾರೆ?"
"ಹೊತ್ತು ಮುಳಗಿದ ಬಳಿಕ ಬರುತ್ತಾರೆ"
ವಿಷಯ ಗೊತ್ತಾಯಿತು. ಅವರು ಬ೦ದ ಬಳಿಕ ಕೇಳೋಣ ಎಂದು ರಾಜ ಹಾಗೂ ಪ್ರಧಾನಿ ಮಾತಾಡಿಕೊಂಡರು.
ತಾನು ಬದನೀಗಿಡಕ್ಕೆ ಮುಳ್ಳು ಹಚ್ಚಲು ಹೋಗಿದ್ದೇನೆಂದು ತಂದೆ ಹೇಳಿದನು. ಹಡೆಯಲಾರದೆ ನಿಂತ ಹೆಂಗುಸಿಗೆ ಹಡೆಯುವಂತೆ ಮಾಡಲು ಹೋಗಿದ್ದೆನೆಂದು ತಾಯಿ ಹೇಳಿದಳು.
ಆ ಹುಡಿಗೆಯ ಮಾತಿನ ಕುಶಲತೆಯನ್ನು ರಾಜನು ಮೆಚ್ಚುವನು. ಅವಳನ್ನು ಮದುವೆಯಾಗಬೇಕೆಂದು ನಿರ್ಧರಿಸುತ್ತಾನೆ. ಮಗಳು ಸುಖದಲ್ಲಿ ಬೀಳುವಳೆಂದು ಅಪ್ಪನು ಮಗಳನ್ನು ರಾಜನಿಗೆ ಕೊಟ್ಟು ಲಗ್ನ ಮಾಡುತ್ತಾನೆ.
ರಾಜನು ಹೊಸ ಹೆಂಡತಿಯನ್ನು ಕರಕೊಂಡು ತನ್ನ ಮನೆಗೆ ಹೋಗುತ್ತಾನೆ.