ಅವನ ಪಾಲಿಗೆ ಉಳಿದದ್ದು ಬಾರಾಹರಿ ನಡೆಯುವ ಕುದುರೆ. ಅದರ ಮೇಲೇರಿ ಬಾರಾಹರಿ ನೆಲ ದಾಟಿದನು. ಹನ್ನೆರಡು ಮೊಳದ ಹಚ್ಚಡ ಹೊಚ್ಚಿಕೊಂಡು ಹೊರಟನು. ಹಾದಿಯಲ್ಲಿ ಒಂದು ಘಟನೆ ನಡೆಯಿತು.
ಇಬ್ಬರು ಗಂಡಹೆಂಡರು. ಅವರಿಗೆ ಇಬ್ಬರು ಮಕ್ಕಳು. ಅವರಿಗೆ ಬಹಳ ಬಡತನ. ಹಚ್ಚಡ ಹೊದ್ದುಕೊಂಡು ಕಳ್ಳ ಹೊರಟಾಗ, ಗಂಡನು ಹೆಂಡತಿಗೆ ಹೇಳುತ್ತಾನೆ—"ಸಣ್ಣ ಮಿಣಿ ಚೀಲು, ದೊಡ್ಡ ಮಿಣಿ ಚೀಲು ತೆಗೆದಿಡು. ಹಾಗೇ ಸರಾದೀಪ ತಗಿ" ಸಣ್ಣ ಮಿಣಿ ಚೇಲು, ದೊಡ್ಡ ಮಿಣಿ ಚೀಲ ಎಂದು ತನ್ನ ಮಕ್ಕಳನ್ನು ಕುರಿತೇ ಅ೦ದಿದ್ದನು. ಆದರೆ ಕಳ್ಳನು ತಿಳಿಕೊಂಡಿದ್ದೇ ಬೇರೆ. ಬಹುತೇಕ ಇವರ ಮನೆಯಲ್ಲಿ ಬಹಳ ದುಡ್ಡು ಅದೆಯೆಂದು ತಿಳಕೊಂಡನು. ಅದರಂತೆ ಸರಿರಾತ್ರಿ ಆದಾಗ ಬಡವನ ಮನೆಯೊಳಗೆ ಹೊಕ್ಕನು. ಆದರೆ ಅಲ್ಲಿ ಏನೇನೂ ಸಿಗಲಿಲ್ಲ. ಪಡಸಾಲೆಯ ಮೂಲೆಯಲ್ಲಿ ಎಳ್ಳಿನ ಹೊರತು ಯಾವ ದಾಣಿಯೂ ಸಿಗಲಿಲ್ಲ. ಬಾರಾಮೊಳದ ಹಚ್ಚಡ ನೆಲದ ಮೇಲೆ ಹಾಸಿ ಎಳ್ಳು ಬರುಕಬೇಕೆಂದಿರುವಾಗ ಗಂಡನು ಕೆಮ್ಮಿದನು. ಹೆಂಡತಿ ಹಚ್ಚಡ ಎಳಕೊಂಡುಬಿಟ್ಟಳು. ಎಳ್ಳು ಬರುಕಿದರೂ ಅವೆಲ್ಲ ನೆಲದ ಮೇಲೆಯೇ ಬಿದ್ದುಬಿಟ್ಟವು. ಸಿಳ್ಳೋ ಎಂದು ಕಳ್ಳ ಮನೆಯ ಕಡೆಗೆ ಹೊರಟನು.
ಕಳ್ಳನ ಮಗಳು ಹಾಗೂ ಆ ಹುಡುಗ ಕೂಡಿ ಜೌವೀಸಹರಿ ನಡೆಯುವ ಕುದುರೆ ತಕ್ಕೊಂಡು ಮುಂದೆ ಸಾಗಿದರು. ಪಟೇಲರ ತೋಟಕ್ಕೆ ಹೋದರು. ಕುದುರೆ ಕಟ್ಟಿದರು. ಆ ಹೊತ್ತು ಅಲ್ಲೇ ವಸತಿ ಒಗೆದರು ಮಜಕೂರಿ ಆಕೆಯನ್ನು ನೋಡಿದನು. ಮನಸ್ಸಿನಲ್ಲಿ ನೆಟ್ಟುಬಿಟ್ಟಿತು ಅವಳ ರೂಪ. "ನಿ೦ದು ಯಾವೂರು" ಎಂದು ಕೇಳಿದನು. "ನಮ್ಮದು ಬಾಳ ದೂರ" ಅಂತ ಆಕೆ ಹೇಳಿದಳು. ಬಹಳ ಚಪಲಳಾಗಿದ್ದಂತೆ ಕಾಣುತ್ತದೆ. "ನಿನ್ನ ಚೌಕಿ ಎಷ್ಟು" ಎಂದು ಮಜಕೂರಿ ಕೇಳಿದನು. ನೂರು ಎಂದಳು ಕಳ್ಳನ ಮಗಳು. ಮಜಕೂರಿ ಅಷ್ಟು ರೂಪಾಯಿ ತೆಗೆದು ಅವಳ ಕೈಯಲ್ಲಿಟ್ಟನು; ಸಂಜೆಮಾಡಿ ಬರತೀನಿ ಎಂದು ಹೇಳಿದನು.
ಮಜಕೂರಿ ಚೌಕಿದಾರನ ಮುಂದೆ ಹೇಳುತ್ತಾನೆ—"ಅಬಬಾ, ತೋಟದಾಗ ಒಂದು ಹೆಣ್ಣು ಬಂದಿದೆ. ಮುಟ್ಟಿದರೆ ಮಾಸುವಂತೆ ಇದ್ದಾಳೆ."
ಚೌಕಿದಾರ ಕೇಳುತ್ತಾನೆ ಕಳ್ಳನ ಮಗಳಿಗೆ—"ನಿನ್ನ ಚೌಕಿ ಎಷ್ಟು?" "ಇನ್ನೂರು" ಎಂದಳಾಕೆ.
ದೀಪ ಹಚ್ಚಿದ ಒಂದು ತಾಸಿನ ಮೇಲೆ ಬರಬೇಕೆಂದು ಹೇಳಲು ಚೌಕಿದಾರನು ಪಟೇಲನ ಬಳಿಗೆ ಹೋಗಿ ಚಲುವೆಯನ್ನು ವರ್ಣಿಸಿದನು.