ಕೊರವಂಜಿಯ ಕಲೆ
ಅಣ್ಣನ ಮಗಳನ್ನು ಅಕ್ಕರೆಯಿಂದ ಮಗನಿಗೆ ತೆಗೆದುಕೊಂಡು ಮದುವೆಮಾಡಿದ್ದಳು, ನೀಲಗಂಗಮ್ಮ. ಆದರೆ ಮಗನು ಮನೆಗೆ ಹತ್ತಲೊಲ್ಲನಾದನು. ಹೊರಗಿನಿಂದ ಹೊರಗೇ ಇರತೊಡಗಿದನು.
ಬಾಳೆಯ ಬನದಲ್ಲಿ ಮಗನು ಚಂಡಾಡುತ್ತಿರುವನೆಂಬ ಸುದ್ದಿ ಕೇಳಿ ತಾಯಿ ಅಲ್ಲಿಗೆ ಹೋಗಿ ಮಗನನ್ನು ಕೇಳಿಕೊಂಡಳು - "ನನ್ನ ಸೊಸೆ ಬಾಳೆಗಿಂತ ಚಲುವೆಯಾಗಿದ್ದಾಳೆ. ಒಂದು ಸಾರೆ ಮನೆಗೆ ಬಂದು ಮುಖ ತೋರಿಸು."
"ಬಾಳೆಗಿಂತ ಚಲುವೆಯಾದರೆ ಭಾವಿಯಲ್ಲಿ ನುಗಿಸು. ಇಲ್ಲವೆ ಉಟ್ಟಬಟ್ಟಿ ಕಳಕೊಂಡು ತವರುಮನೆಗೆ ಕಳಿಸು. ನಾನು ನನಗೆ ತಿಳಿದಂತೆ ವರ್ತಿಸುವೆನು" ಎಂಬುದು ಮಗನ ಮರುನುಡಿ.
ಇನ್ನೊಂದು ಸಾರೆ, ಮಗನು ನಿಂಬಿಯ ಬನದಲ್ಲಿ ಚೆಂಡಾಡುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗಿ - "ನಿಂಬೆಗಿಂತ ನನ್ನ ಸೊಸೆ ಚೆಲುವೆಯಾಗಿದ್ದಾಳೆ ಒಂದೇ ಸಲ ಮನೆಗೆ ಬಂದು ಮೊಗದೋರು" ಎಂದು ಅಂಗಲಾಚಿದಳು.
ಕಟ್ಟಿಗೆ ಮುರಿದು ಕೈಗೆ ಕೊಟ್ಟಂತೆ ಮಗನು ಮರುನುಡಿದನು - "ನಿಂಬೆಗಿಂತ ಚೆಲುವೆಯಾಗಿದ್ದರೆ ಆಕೆಯನ್ನು ಬಾವಿಗೆ ನೂಕು. ಇಲ್ಲವೆ ಕಟ್ಟಿದ ಕರಿಮಣಿಯನ್ನು ಹರಕೊಂಡು ತವರುಮನೆಗೆ ಹಚ್ಚಗೊಡು. ನಾನು ನನಗೆ ತಿಳಿದಂತೆ ಮಾಡುವೆನು."
ತಾಯಿ ನಿರಾಶಳಾಗಿ ಮನೆಗೆ ಬಂದು ಸೊಸೆಗೆ ಹೇಳಿದಳು - "ಅಣ್ಣನ ಮಗಳೆಂದು ಹೆಮ್ಮೆಯಿಂದ ನಿನ್ನನ್ನು ತಂದುಕೊಂಡರೆ ಮಗನು ಮಾತೇ ಕೇಳದಾಗಿದ್ದಾನೆ. ಸೊಸೆಮುದ್ದೇ, ಹೋಗಿ ಬಿಡವ್ವ ನಿನ್ನ ತವರುಮನೆಗೆ."
"ಯಾರು ಅಣ್ಣ ಯಾರು ತಮ್ಮ? ತಾಯಿ ಯಾರು ತಂದೆ ಯಾರು? ಅಣ್ಣನ ಮದುವೆ ಹೆಂಡಿರಾರು ಅತ್ತೆ? ತವರುಮನೆಗೆ ಹೋಗಲಾರೆ. ಒಂದು ಹೊನ್ನು ಖರ್ಚುಮಾಡಿ ಮದುವೆ ಮಾಡಿದಿ; ಈಗ ಎರಡು ಹೊನ್ನು ಖರ್ಚು ಮಾಡಿ ನನಗೆ ಕೊರವಂಜಿ ಬುಟ್ಟಿ ಕೊಂಡುಕೊಡು. ಅತ್ತೇ, ಗಂಡನನ್ನು ನೋಡಿ ಬರುವೆ. ಆತನ ರಂಡೆಯನ್ನು ನೋಡಿ ಬರುವೆ" ಎಂದಳು ಸೊಸೆ