ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಜನಪದ ಕಥೆಗಳು

ಆ ಮನೆಯಲ್ಲಿ ಕಳ್ಳನ ತಾಯಿ ಮುದುಕಿ ಕಾವಲಿದ್ದಳು. ಆ ಮುದುಕೆಗೆ ಆತನು ರಾತ್ರಿಯ ಮಟ್ಟಿಗೆ ಇರಲು ಜಾಗ ಕೇಳಿದನು. ಆಕೆ ಸಮ್ಮತಿಸಲು ಊಟಮಾಡಿ ಆತನು ಮಲಗಿಕೊಂಡನು.

ಆತನಿಗೆ ನಿದ್ದೆ ಹತ್ತಿದಾಗ ಮನೆಯ ಕಾವಲಿನ ಮುದುಕಿ ಒಂದು ಬಂಗಾರದ ಬಟ್ಟಲು ತಂದು ಅವನ ಅಂಗಿಯ ಕಿಸೆಯಲ್ಲಿ ಬಚ್ಚಿಟ್ಟಳು. ಮರುದಿನ ಮುಂಜಾನೆ -ಈತನು ಬಂಗಾರ ಬಟ್ಟಲು ತಗೊಂಡು ಹೊರಟಿದ್ದಾನೆ - ಎಂದು ಮುದುಕಿ ಬೊಬ್ಬಿಟ್ಟಳು. ಸಾಕಷ್ಟು ಮಂದಿ ನೆರೆಯಿತು. ಆ ಹುಡುಗನು ಹೇಳಿದನು- “ನಾನಂತೂ ಮುಂದಿನೂರಿಗೆ ಹೊರಟಿದ್ದೇನೆ. ಈ ಮನೆಯೊಳಗಿನದೇನೂ ತೆಗೆದುಕೊಂಡಿಲ್ಲ. ನಾನು ಏನನ್ನೂ ನೋಡಿಲ್ಲ.”

ಆದರೆ ಆತನ ಅಂಗಿಯ ಕಿಸೆಯಲ್ಲಿ ಬಟ್ಟಲು ಸಿಕ್ಕಿತು. 'ನೀನಿಲ್ಲೇ ಕುಳಿತುಕೋ' ಎನ್ನಲು, ಆತನು ನಿರಾಶನಾಗಿ ಕುಳಿತುಕೊಂಡನು. ಕಳ್ಳನ ಮನೆಯಲ್ಲೇ ಅವನಿಗೆ ಒಳಿತಾಗಿ ವ್ಯವಸ್ಥೆ ಮಾಡಿದರು.

ಆ ಸಮಾಚಾರವನ್ನು ಕೇಳಿ ಆತನ ಹೆಂಡತಿಯು ಗಂಡಸರ ವೇಷ ತೊಟ್ಟಳು. ಹೊತ್ತು ಮುಳುಗುವ ಸಮಯ ಆಗಿತ್ತು. ಅದೇ ವೇಷದಲ್ಲಿ ಕಳ್ಳನ ಮನೆಗೆ ಹೋದಳು. ಅಲ್ಲಿ ಗಂಡನು ಕುದುರೆಗೆ ನೀರು ಕುಡಿಸುತ್ತ ನಿಂತಿದ್ದನು. ಅಂದು ರಾತ್ರಿ ಅಲ್ಲೇ ಉಳಿದಳು.

ಮುದುಕಿ ಮತ್ತೆ ಬಂಗಾರದ ಬಟ್ಟಲು ತಂದು ಈಕೆಯ ಮಡಿಲಲ್ಲಿ ಇಟ್ಟಳು. ಈಕೆ ಡುಕ್ಕು ಹೊಡೆದು ಮಲಗಿದ್ದಳು. ಆ ಬಂಗಾರದ ಬಟ್ಟಲು ಒಯ್ದು, ತಿರುಗಿ ಮುದುಕಿಯ ಬುಟ್ಟಿಯಲ್ಲಿ ಒಯ್ದಿಟ್ಟಳು. ಬೆಳಗಾಯಿತು. ಮುದುಕಿ ಮತ್ತೆ ಬಂಗಾರದ ಬಟ್ಟಲು ಹೋಯ್ತು ಎಂದು ಕೂಗಾಡಿದಳು. ಜನ ಕೂಡಿತು. ವಸತಿ ಮಾಡಿದವನ ಅಂಗಿಚುಂಗುಗಳಲ್ಲಿ ಹುಡುಕಿದರು. ಎಲ್ಲಿಯೂ ಸಿಗಲಿಲ್ಲ ಬಂಗಾರದ ಬಟ್ಟಲು ಕೊನೆಯಲ್ಲಿ ಬುಟ್ಟಿಯಲ್ಲಿಯೇ ಬಂಗಾರದ ಬಟ್ಟಲು ಸಿಕ್ಕಿತು.

“ಏ ಮುದುಕಿ, ನಿಮ್ಮ ಮನೆಯಲ್ಲೇ ಅದೆಯಲ್ಲ ಬಟ್ಟಲು” ಎಂದು ಜನರೆಲ್ಲ ಮುದುಕಿಗೆ ಛೀ ಥೂ ಅಂದರು. ಮುದುಕಿಗೆ ಹೊಡೆದು ಹೊರದೂಡಿಯೇ ಬಿಟ್ಟರು.

ಗಂಡಸು ವೇಷದಲ್ಲಿದ್ದ ಆ ಹೆಣ್ಮಗಳು ಪೂರ್ತಿಯಾಗಿ ಮನೆಯನ್ನು ಗೆದ್ದು ಬಿಟ್ಟಳು. “ನನ್ನ ಕುದುರೆಗೆ ನೀರು ಕುಡಿಸಿಕೊಂಡು ಬಾ ನಿನಗೊಂದು ರೂಪಾಯಿ ಕೊಡುತ್ತೇನೆ” ಎಂದು ಹೇಳಿದಳು. “ಕುದುರೆ ಒರೆಸಿದರೆ ಒಂದು ರೂಪಾಯಿ, ಹಾಸಿದರೆ ಒಂದು ರೂಪಾಯಿ, ತನ್ನ ಕೈ ಕಾಲು ಒತ್ತಿದರೆ ಒಂದು ರೂಪಾಯಿ,