ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೇವರು ಕೊಟ್ಟರೇನು ಕಡಿಮೆ?

ಬಡವೆಯಾದ ವಿಧವೆಗೊಬ್ಬ ಮಗನಿದ್ದನು. ಅವನು ಶಾಲೆಗೆ ಹೋದಾಗ ಸರಿಯರು ಧರಿಸಿದ್ದ ಒಳ್ಳೊಳ್ಳೆಯ ಬಟ್ಟೆಗಳನ್ನೂ ಅವರು ತರುತ್ತಿದ್ದ ತಿಂಡಿತಿನಿಸು ಆಟಿಗೆಗಳನ್ನೂ ಕಂಡು, ಅವು ತನಗೂ ಬೇಕೆಂದು ತಾಯಿಯ ಬಳಿಯಲ್ಲಿ ಕೇಳುವನು. "ನಾವು ಬಡವರು. ಅಂಥ ಬಟ್ಟೆ, ತಿನಿಸು, ಆಟಿಗೆಗಳನ್ನು ಎಲ್ಲಿಂದ ತರೋಣ? ಶ್ರೀಮಂತಿಕೆಯಿದ್ದರೆ ನಮಗೂ ಸಿಗುತ್ತಿದ್ದವು?" ಎಂದಳು ತಾಯಿ.

"ನಮಗೆ ಶ್ರೀಮಂತಿಕೆ ಏಕಿಲ್ಲ?" ಮಗನ ಪ್ರಶ್ನೆ.

"ದೇವರು ಕೊಟ್ಟಿದ್ದರೆ ಶ್ರೀಮಂತಿಕೆ ಇರುತ್ತಿತ್ತು" ಇದು ತಾಯಿಯ ಸಮಾಧಾನ.

"ದೇವರು ಕೊಡುವನೇ? ಹಾಗಾದರೆ ಅವನನ್ನು ಕಂಡು ನಮಗೆ ಬೇಕಾದುದನ್ನೆಲ್ಲ ಇಸಗೊಂಡು ಬರುತ್ತೇನೆ. ಎಲ್ಲಿದ್ದಾನೆ ದೇವರು?"

"ಎಲ್ಲಿಯೋ ಇದ್ದಾನಂತೆ ದೇವರು. ನಾವೇನೂ ಕಂಡಿಲ್ಲ" ಎಂದಳಾಕೆ.

"ನಾಳೆಯೇ ನಾನು ದೇವರನ್ನು ಹುಡುಕಲು ಹೋಗುವೆನು. ದಾರಿಯ ಬುತ್ತಿ ಕಟ್ಟಿಕೊಡು."

ತಾಯಿ ದಾರಿಯ ಬುತ್ತಿ ಕಟ್ಟಿಕೊಡಲು ದೇವರನ್ನು ಹುಡುಕುತ್ತ ಮಗನು ಹೊರಟೇಬಿಟ್ಟನು. ಕೆಲವು ಹರದಾರಿ ದಾರಿ ನಡೆದ ಬಳಿಕ, ದೊಡ್ಡದಾದ ಜನಜಂಗುಳಿ ಸೇರಿ ಅಲ್ಲೊಂದು ಬಾವಿ ಅಗಿಯುವ ಕೆಲಸದಲ್ಲಿ ತೊಡಗಿತ್ತು. ಅಲ್ಲಿಗೆ ಹೋಗಿ ಹುಡುಗನು ಕೇಳಿದನು—"ದೇವರು ಎಲ್ಲಿರುತ್ತಾನೆ? ನಾನು ಅವನನ್ನು ಕಾಣ ಬೇಕಾಗಿದೆ."

ಜನರೆಲ್ಲ ನಕ್ಕುಬಿಟ್ಟರು, ಹುಚ್ಚು ಹುಡುಗನೆಂದು. "ದೇವರು ಇಲ್ಲಿಯಂತೂ ಇಲ್ಲ. ಎಲ್ಲಿದ್ದಾನೆ ನಮಗೆ ಗೊತ್ತೂ ಇಲ್ಲ. ನಿಮಗೆ ಅವನು ಸಿಕ್ಕರೆ ನಮ್ಮ ಸಲುವಾಗಿ ಒಂದು ಪ್ರಶ್ನೆ ಕೇಳಿಕೊಂಡು ಬಾ—ನಮ್ಮ ಬಾವಿಗೆ ನೀರು ಯಾವಾಗ ಬೀಳತ್ತವೆ?"—ಸಾಹುಕಾರನು ಹೇಳಿದನು.

ಹುಡುಗನು ಮತ್ತೆ ಕೆಲವೊಂದು ಹರದಾರಿ ದಾಟುವಷ್ಟರಲ್ಲಿ ಒಂದು ಹೆಬ್ಬಾವು ದಾರಿಯಲ್ಲಿ ಅಡ್ಡ ಬಿದ್ದಿದೆ. ದಾಟಲೂ ಸಾಧ್ಯವಿಲ್ಲ. ಕಾಲಕಡೆಯಿಂದಲೋ ತಲೆಕಡೆಯಿ೦ಂದಲೋ ಹಾಯ್ದು ಸುತ್ತುವರಿದು ಹೋಗಬೇಕೆಂದರೆ ಹೊರಹೊರಳಿ