ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮ್ಯಕಥೆಗಳು
೩೧

ಬಂದು ತಡೆಮಾಡತೊಡಗಿತು. "ದಾರಿ ಬಿಡು ಹಾವಣ್ಣ" ಎಂದು ಹುಡುಗ ಕೇಳಲು "ನೀನೆಲ್ಲಿ ಹೋಗುವಿ" ಎಂದು ಮರುಪ್ರಶ್ನೆ ಮಾಡಿತು ಹಾವು.

"ದೇವರನ್ನು ಹುಡುಕಲು ಹೊರಟಿದ್ದೇನೆ. ನಿನಗೇನಾದರೂ ಗೊತ್ತಿದೆಯೇ ದೇವರೆಲ್ಲಿ ಇದ್ದಾನೆಂಬುದು" ಎಂದು ಬಾಲಕನು ಕೇಳಲು ಹಾವು ಹೇಳಿತು "ದೇವರು ಇದ್ದಾನೆಂದು ಎಲ್ಲರೂ ಹೇಳುತ್ತಾರೆ. ಕಂಡವರಾರೋ ಗೊತ್ತಿಲ್ಲ. ನಿನಗೆ ದೇವರ ದರ್ಶನವಾದರೆ ನನ್ನ ಸಲುವಾಗಿ ಒ೦ದು ಮಾತು ಕೇಳು ನನ್ನ ಕಣ್ಣು ಎಂದು ಬರುವವು?"

"ಕೇಳಿಕೊಂಡು ಬರುತ್ತೇನೆ" ಎಂದು ಮರುನುಡಿದು ಬಾಲಕನು ಪುನಃ ಹರದಾರಿ ಮುಂದೆ ಹೋಗಿ ಒಂದು ಕಟ್ಟಡವಿಗೆ ಬಂದನು. ಅಲ್ಲಿ "ದೇವರೇ" ಎಂದು ಆರ್ತ ಧ್ವನಿಯಿಂದ ಕೂಗಲು, ದೂರದಿಂದ "ಓ" ಎಂಬ ಧ್ವನಿ ಕೇಳಿಸಿತು. ಅಲ್ಲಿಗೆ ಹೋದನು. ಒಬ್ಬ ಮುಪ್ಪಿನ ಸತ್ಪುರುಷನು ಅಲ್ಲೊಂದು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದನು. "ಏಕೆ ಕೂಗಿದೆ ನನ್ನನ್ನು" ಎಂದು ಕೇಳಿದನು. "ಹಾಗಾದರೆ ನೀನೇ ದೇವರು" ಎಂದನು ಬಾಲಕನು. "ನಾನು ದೇವರು ಅಹುದೋ ಅಲ್ಲವೋ ತೆಗೆದುಕೊ೦ಡು ಏನುಮಾಡುತ್ತೀ? ನಿನಗೇನು ಬೇಕಾಗಿತ್ತು" ಎಂದನಾ ಮುದುಕ.

"ನಾವು ಬಡವರು. ಒಳ್ಳೆ ಬಟ್ಟೆ—ತಿಂಡಿ—ಆಟಿಕೆ ನಮಗೆ ಸಿಗುವುದಿಲ್ಲ. ಅವನ್ನೆಲ್ಲ ಕೊಡು" ಎಂದು ಕೇಳಿದ ಬಾಲಕನಿಗೆ ಆ ಸತ್ಪುರುಷನು ಒಂದು ಬಟ್ಟಲು ಕೊಟ್ಟು—ಇದನ್ನು ಪೂಜಿಸಿ ನಿನಗೆ ಬೇಕಾದುದನ್ನು ಕೇಳಿಕೋ. ಅದು ಕೊಡುತ್ತದೆ" ಎಂದನು. ಬಟ್ಟಲು ತೆಗೆದುಕೊಂಡು ತನ್ನೂರಿಗೆ ಹೊರಟು, ದಾರಿಯಲ್ಲಿ ಒಂದೂರಿನ ಮನೆಯಲ್ಲಿ ರಾತ್ರಿ ವಸತಿ ಮಾಡಿದಾಗ ಆ ಮನೆಯವರಿಗೆ ತನ್ನ ಪ್ರವಾಸದ ಉದ್ದೇಶವನ್ನೆಲ್ಲ ವಿವರಿಸಿ, ದೇವರು ಕೊಟ್ಟ ಬಟ್ಟಲು ತೋರಿಸಿದನು. ಅದು ಬೇಡಿದ್ದು ಕೊಡುತ್ತದೆಂದು ಹೇಳಿದನು. ಮನೆಯವರು ಆತನಿಗೆ ಕಣ್ಣು ತಪ್ಪಿಸಿ ಆತನ ಗಂಟಿನೊಳಗಿನ ಬಟ್ಟಲು ಎತ್ತಿ ಅಂಥದೇ ಆದ ತಮ್ಮ ಬಟ್ಟಲನ್ನು ಅದರಲ್ಲಿ ಇರಿಸಿದರು.

ತನ್ನೂರಿಗೆ ಬಂದ ಬಳಿಕ ತಾಯಿಗೆ ಎಲ್ಲ ಸಂಗತಿಯನ್ನು ವಿವರಿಸಿ, ಬಟ್ಟಲು ಪೂಜೆ ಮಾಡಿದನು. ಆದರೆ ಅದು ಏನೂ ಕೊಡಲಿಲ್ಲ. ದೇವರೆಂದು ಹೇಳಿಕೊಂಡ ಆ ಮುದುಕನೇ ಮೋಸ ಮಾಡಿದನೆಂದು ಬಗೆದು ಮರುದಿನ ಮತ್ತೆ ಪ್ರಯಾಣ ಮಾಡಿದನು.