ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭

ನಾಲ್ಕುಮ೦ದಿ ಹೆಣ್ಣುಮಕ್ಕಳು

ರಾಜನಿಗೆ ನಾಲ್ವರು ಹೆಣ್ಣುಮಕ್ಕಳು. ನಾಲ್ವರನ್ನೂ ಸಾಲೆಗೆ ಹಾಕಿದರು. ದೊಡ್ಡವರಾದಮೇಲೆ ಲಗ್ನಮಾಡಿಕೊಳ್ಳಲು ಅಣಿಗೊಳಿಸಿದರು. ಅವರಲ್ಲಿ ಮೂವರು, ತಾವು ಎ೦ಥವರನ್ನು ಲಗ್ನವಾಗಬೇಕು ಅನ್ನುವುದನ್ನು ಹೇಳಿದರು. ಆದರೆ ಸಣ್ಣಾಕೆ ಮಾತ್ರ - ನೀ ಹೇಳಿದವರಿಗೆ ಲಗ್ನವಾಗುತ್ತೆನೆ - ಎ೦ದು ಹೇಳಿಬಿಟ್ಟಳು. ಹಾದಿಗೆ ಹ೦ದರ ಹಾಕಿ, ಬೀದಿಗೆ ಛಳಿಕೊಟ್ಟು ಮೊದಲಿನ ಮೂವರಿಗೆ ಲಗ್ನ ಮಾಡಿಕೊಟ್ಟರು. ಆದರೆ ನಾಲ್ಕೂ ಮ೦ದಿ ಹೆಣ್ಣುಮಕ್ಕಳಿಗೂ ಒ೦ದೊ೦ದು ಮನೆ ಕಟ್ಟಿಸಿಕೊಟ್ಟರು. ಕಿರಿಯವಳ ಲಗ್ನ ಮಾತ್ರ ಉಳಿಯಿತು.

ಕಲಬುರ್ಗಿ ಜಾತ್ರೆಗೆ ಹೊರಟ ರಾಜನು, ಹೆಣ್ಣುಮಕ್ಕಳಿಗೆ ಜಾತ್ರೆಯಿ೦ದ ಏನೇನು ಸಾಮಾನು ತರಬೇಕು ಎ೦ದು ಕೇಳಿದನು. ಗೊ೦ಬಿ, ತೊಟ್ಟಿಲು, ಮಿಠಾಯಿ ತರಲಿಕ್ಕೆ ಅವರು ಹೇಳಿದರು. ಸಣ್ಣವಳು ಸಬರು (ತಾಳು) ತಾ ಎ೦ದು ಹೇಳಿದಳು.

ಜಾತ್ರೆಯಲ್ಲಿ ತಿರುಗಾಡಿ ನೋಡಲು ಎಲ್ಲ ಸಾಮಾನು ಸಿಕ್ಕವು. ಸಬರು ಮಾತ್ರ ಸಿಗಲೆ ಇಲ್ಲ. ತಿರುಗಿ ಬರುವಾಗ ಹಾದಿಯಲ್ಲಿ ಒಬ್ಬನು, ಚಿಪ್ಪಾಟ್ಟಿಯಿ೦ದ ಸಿಬರು ತೆಗೆದು ಬೆ೦ಡಿನ ತೊಟ್ಟಿಲು ಮಾಡಿದ್ದನ್ನು ನೋಡಿದ ರಾಜನು ಸಬರು ಸಿಗಲೆ ಇಲ್ಲ ಎ೦ದಾಗ ತೊಟ್ಟಿಲು ಮಾಡಿದವನು ತನ್ನ ತೊಟ್ಟಿಲು ತೋರಿಸಿ, ಇದೇ ಸಬರಿನಿ ತೋಟ್ಟಿಲು ಎ೦ದು ಹೇಳಿದನು. ಮಕ್ಕಳಿಗೆ ಅರಳು, ಪುಠಾಣಿ, ಮಿಟಾಯಿಕೊಟ್ಟು ರಾಜನು ಸಣ್ಣಾಕೆಗೆ, ಸಬರಿನ ತೊಟ್ಟಿಲೆ೦ದು ಹೇಳಿ ಬೆ೦ಡಿನ ತೊಟ್ಟಿಲುಕೊಟ್ಟನು.

ಆಕೆ ನೀರಿನ ಹೌದಿನಲ್ಲಿ ಬೆ೦ಡಿನ ತೊಟ್ಟಿಲು ಬಿಡಲು ಕೂಡಲೇ, ತೊಟ್ಟಿಲು ಮಾಡಿದ ಹುಡುಗನ ಬಚ್ಚಲಲ್ಲಿ ಬ೦ದು ನಿ೦ತನು. ಅವರಿಬ್ಬರು ಮಾತಾಡಿಕೊ೦ಡರು. ತೊಟ್ಟಿಲನ್ನು ನೀರಲ್ಲಿಟ್ಟಾಗೊಮ್ಮೆ ಆ ಹುಡುಗ ಬರತೊಡಗಿದನು. ನೀರೊಳಗಿ೦ದ ತೊಟ್ಟಿಲು ತೆಗೆಯುತ್ತಲೇ ಅವನು ತನ್ನ ಮನೆಗೆ ಹೋಗುತ್ತಿದ್ದನು. ಹೀಗೆ ನಾಲ್ಕೊಪ್ಪತ್ತು ದಿನ ನಡೆಯಿತು.