ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಮ್ಯಕಥೆಗಳು

೪೧

ಬೇಕೆಂದೇ ಬೆರೆಸಿದರು. ಉಂಡೆದ್ದು ಎಲೆ ಅಡಿಕೆ ತೆಗೆದುಕೊಳ್ಳುವ ಹೊತ್ತಿಗೆ ನಾಗಮ್ಮನಿಗೆ ಹಿಂದಕ್ಕೆ ಮುಂದಕ್ಕೆಂದರೆ ವಾಂತಿ-ಭೇದಿ ಆಗತೊಡಗಿತು. ಅಷ್ಟರಲ್ಲಿ ತುಸು ರಾತ್ರಿಯೇ ಆಗಿದ್ದರಿಂದ ಇನ್ನುಳಿದ ಆರೂ ಜನ ನೆಗೇಣಿಯವರನ್ನು ಕಳಿಸಿಕೊಡುವಾಗ—"ನಾಗಮ್ಮನು ತುಸು ವಿಶ್ರಾಂತಿ ತೆಗೆದುಕೊಳ್ಳಲಿ ಮುಂಜಾನೆ ಬರುವಳು" ಎಂದರು.

ರಾತ್ರಿಯ ಸಟ್ಟ ಸರಿಹೊತ್ತು. ಶೆಟ್ಟಿಯು ನಾಗಮ್ಮನ ಮೈಮುಟ್ಟ ಕೈಮುಟ್ಟ ಹೋಗತೊಡಗಿದನು. ಆ ಸಂದರ್ಭದಲ್ಲಿ ನಾಗಮ್ಮನು ತನ್ನ ಕೊರಳೊಳಗಿನ ಪುತ್ಥಳಿಸರವನ್ನು ಬೇಕೆಂದಲೇ ಹರಿದು ಚಲ್ಲಾಡಿದಳು. ಅಲ್ಲದೆ "ನಮ್ಮತ್ತೆ ಬಯ್ಯುತ್ತಾಳೆ. ಮೊದಲಿದನ್ನು ಪವಣಿಸಿಕೊಡಿರಿ" ಎಂದು ಛಲ ಹಿಡಿದಳು. ಶೆಟ್ಟಿ ಅದೇನು ಮಹಾಕೆಲಸ ಎಂದು, ಪುತ್ಥಳಿಸರವನ್ನು ಪವಣಿಸತೊಡಗಿದನು. ಆತನು ಮುಂದೆ ಪವಣಿಸಿದಂತೆ, ಆಕೆ ಹಿ೦ದಿನದನ್ನು ಮೆಲ್ಲನೆ ಉಚ್ಚಲು ತೊಡಗಿದಳು. ಅಷ್ಟರಲ್ಲಿ ನಸುಕುಹರಿಯಿತು.

"ಕಾಲುಮಡಿದು ಬರಬೇಕು. ಬಾಗಿಲು ತೆಗೆಯಿರಿ" ಎಂದಳು ನಾಗಮ್ಮ.

"ಭಾಷೆಕೊಟ್ಟು ಹೋಗು" ಎಂದನು ಶೆಟ್ಟಿ.

ಎದೆಯ ಮೇಲಿನ ಸೆರಗಿನ ಚುಂಗನ್ನು ಆತನ ಕೈಗಿತ್ತು ಮೆಟ್ಟುಗಟ್ಟೆ ಇಳಿಯುತ್ತ ಒಂದೊಂದು ನಿರಿಗೆ ಉಚ್ಚಿದಳು. ನಾಲ್ಕು ಸೋಪಾನಗಳನ್ನಿಳಿದು ಸೀರೆಯ ಕೆಳ ಸೆರಗನ್ನು ಅಂಗಳದಲ್ಲಿ ಕಟ್ಟಿದ ಎಮ್ಮೆಯ ಕೋಡಿಗೆ ಸಿಕ್ಕಿಸಿದವಳೇ ತನ್ನ ಮನೆಯತ್ತ ಧಾವಿಸಿದಳು.

"ಅತ್ತೆವ್ವ ಅತ್ತೆವ್ವ ಬಾಗಿಲು ತೆಗೆಯಿರಿ" ಎ೦ಬ ದನಿ ಕೇಳಿ, ಒಳಗಿನವರು ಕೇಳಿದರು—"ಇಂಥ ಕತ್ತಲು ರಾತ್ರಿಯಲ್ಲಿ ಬಂದ ನೀನು ದೆವ್ವವೋ ಭೂತವೋ? ಏನಿರುವಿ?"

"ದೆವ್ವಲ್ಲ ಭೂತವೂ ಅಲ್ಲ. ಅತ್ತೆ, ನಾನು ನಿನ್ನ ಚಿಕ್ಕ ಸೊಸೆ ನಾಗಮ್ಮ"

ಎನ್ನಲು ಅತ್ತೆ ಓಡಿಬ೦ದು ಬಾಗಿಲು ತೆರೆದಳು.

"ಹೀಗೇಕೆ" ಎಂದು ಕೇಳಲು ನಡೆದ ಸ೦ಗತಿಯನ್ನೆಲ್ಲ ನಾಗಮ್ಮ ಅತ್ತೆಯ ಮುಂದೆ ವಿವರಿಸಿದಳು.

ಪಟ್ಟಸಾಲೆಂಖ ಶೆಟ್ಟಿಯ ಕೈಗೆ ಬಂದರೂ ಬಾಯಿಗೆ ಬರಲಿಲ್ಲ, ಆ ಜಂಬುನೀರಲ ಹಣ್ಣು.

 •