ದೊರಕಿಸಿ ಅಣ್ಣಂದಿರ ಬುತ್ತಿಯಲ್ಲಿ ಬೆರೆಸಿದನು. ಅದರಲ್ಲಿ ತನ್ನ ಬುತ್ತಿಯೂ ಇದ್ದುದನ್ನು ಮರೆತೇಬಿಟ್ಟನು.
ಎಲ್ಲರೂ ಕೂಡಿ ತಂತಮ್ಮ ಮನೆಯಿಂದ ತರಿಸಿಕೊಂಡ ಬುತ್ತಿಗಳನ್ನು ಬಿಚ್ಚಿ ಉಣ್ಣಲು, ವಿಷವೇರಿ ಸತ್ತುಬಿದ್ದರು.
ಆ ಊರಿನ ರಾಜ, ಪ್ರಧಾನಿ ಬೇಟೆಯಾಡುತ್ತ ಆ ಸಂದರ್ಭದಲ್ಲಿ ಗುಹೆಯ ಬಳಿ ಬಂದರು. ಏಳು ಜನ ಸತ್ತುಬಿದ್ದುದನ್ನು ಕಂಡರು. ಅವರೆಲ್ಲ ಕಳ್ಳರೇ ಎಂದು ನಿರ್ಧರಿಸಿದರು. ಅಲ್ಲಿ ಸೂರೆಗೊಂಡ ಹಣವನ್ನೆಲ್ಲ ಚೀಲು ತುಂಬಿ ಕುದುರೆಗಳ ಮೇಲೆ ಹೇರಿಸಲು ರಾಜನು ಪ್ರಧಾನಿಗೆ ತಿಳಿಸಿದನು. ಅದರಂತೆ ಪ್ರಧಾನಿಯು ಹಣವನ್ನೆಲ್ಲ ಗಂಟುಬಿಚ್ಚಿ ಕುದುರೆಗಳ ಮೇಲಿಟ್ಟು ಹಗ್ಗದಿಂದ ಬಿಗಿಸಿದನು, ರಾಜನೂ ಪ್ರಧಾನಿಯೂ ತಂತಮ್ಮ ಕುದುರೆ ಹತ್ತಿ ಊರಕಡೆಗೆ ಸಾಗಿದರು.
ಪ್ರಧಾನಿಯ ಮನದಲ್ಲಿ ವಿಕಲ್ಪವು ಮೊಳೆಯಿತು, ಅಷ್ಟೆಲ್ಲ ದ್ರವ್ಯವು ತನ್ನದೇ ಆಗಲೆಂದು. ಸೊಂಟದೊಳಗಿನ ಚಂದ್ರಹಾರದಿಂದ ರಾಜನ ಕುತ್ತಿಗೆಗೆ ಜಡಿದನು. ಅದರಿಂದ ಅವನ ರುಂಡ-ಮುಂಡಗಳು ಬೇರ್ಪಟ್ಟು ಬಿದ್ದವು. ಆದರೆ ರಾಜನ ರುಂಡವು ಟುಣುಪುಣು ಜಿಗಿದಾಡತೊಡಗಿತು — "ಮಂತ್ರೀ, ನನ್ನ ಉಪ್ಪನ್ನುಂಡು ದ್ರವ್ಯದಾಶೆಯಿಂದ ನನ್ನ ಹೆಣವನ್ನೇ ಕೆಡವಿದಿಯಲ್ಲ! ಹಣವನ್ನು ಅದೆಷ್ಟು ಚಲ್ಲಿದರೆ ಈ ಸತ್ತ ಜೀವವು ಬಂದೀತು?” ಎಂದು ದವಡೆಕಚ್ಚಿ ಕೇಳಿದಂತಾಯಿತು. ಮರುಕ್ಷಣವೇ ರುಂಡವು ಉರುಳುತ್ತ ಹೋಗಿ ಹತ್ತಿರದ ಬಾವಿಯಲ್ಲಿ ಬಿದ್ದುಕೊಂಡಿತು.
ಮಂತ್ರಿಗೆ ಅತಿಶಯ ಪಶ್ಚಾತ್ತಾಪವಾಯಿತು. ಅರಮನೆಯಲ್ಲಿ ಕೇಳಿದರೆ ಅವರಿಗೆ ಏನೆಂದು ಹೇಳಲಿ? ಹಣದಾಶೆಯಿ೦ದ ನಾನು ಪರಮನೀಚನಾದೆ ಎಂದು ಎಲ್ಲ ಅನರ್ಥಗಳಿಗೂ ಮೂಲವಾದ ಹಣವನ್ನು ಬಾವಿಗೆ ಚೆಲ್ಲಿದನು. ಆ ಹಣದ ಸಹವಾಸದಿಂದ ತನಗೆ ದುರ್ಬುದ್ಧಿ ಬಂದಿತಲ್ಲದೆ, ತನಗೇನೂ ಅರಮನೆಯಯಲ್ಲಿ ಕಡಿಮೆಯಿರಲಿಲ್ಲವಲ್ಲ! ಆದ್ದರಿಂದ ಆ ಹಣವು ಪಾಪಿಯ ಹಣವೇ ಇರಬೇಕು. ಅಸಹ್ಯವಾದ ಈ ವೇದನೆಯು ಇಲ್ಲದಾಗಬೇಕಾದರೆ ನಾನೂ ರಾಜನ ರುಂಡ ಬಿದ್ದ ಬಾವಿಯಲ್ಲಿಯೇ ಬಿದ್ದು ಸಾಯುವುದೇ ಉಪಾಯವೆಂದು ಅತ್ತ ತೆರಳಿದನು.
"ಸ್ವಾಮಿದ್ರೋಹಿ, ಪಾಪಿ! ಈ ಬಾವಿಯಲ್ಲಿ ಬಿದ್ದು ಸತ್ತು ನೀರನ್ನು ಅಪವಿತ್ರ ಮಾಡಬೇಡ. ಆ ಸಾವಿರರೂಪಾಯಿಗಳ ಆಶೆಗೆ ಬಿದ್ದು ಈಗಾಗಲೇ ಒಂಬತ್ತು ಜನರು ಪ್ರಾಣತೆತ್ತಿದ್ದಾರೆ. ನೀನೊಬ್ಬ ಹತ್ತನೆಯವನು. ಮತ್ತೆಲ್ಲಾದರೂ ಹೋಗು"