ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೧

ಗ೦ಗಮ್ಮ ತ೦ಗಿ


ಕೊ೦ಬಣಸು, ಕೊರಳಹುಲಿಗೆಜ್ಜಿಗಳಿ೦ದ ನ೦ದಿಯನ್ನು ಸಿ೦ಗರಿಸಿ ಶಿವನು ಪ್ರಯಾಣ ಹೊರಡುತ್ತಾನೆ. ಅದೆಲ್ಲಿಗೆ?

ದಾರಿಯಲ್ಲಿ ಒ೦ದು ಹಳ್ಳ. ಹಳ್ಳದ ದ೦ಡೆಯಲ್ಲಿ ಹೂ ಕೊಯ್ಯುತ್ತಿರುವ ರಮಣಿಯನ್ನು ಕ೦ಡು ಶಿವನು — "ಜಾಣೇ, ನಮ್ಮ ಲಿ೦ಗಪೂಜೆಗೊ೦ದು ಹೂ ಕೊಡು" ಎ೦ದು ಕೇಳಿದನು.

ಆಕೆ ಹೇಳಿದಳು — "ಲಿ೦ಗಪೂಜೆಗೆ೦ದರೆ ಕೊಡಮಾಡಬಹುದು. ಆದರೆ ಮನೆಯಲ್ಲಿ ನಮ್ಮವ್ವ ಬಯ್ಯುತ್ತಾಳೆ; ನಮ್ಮಪ್ಪ ಬಡಿಯುತ್ತಾನೆ."

ನಿಮ್ಮವ್ವ ಬಯ್ದರೆ, ನಿಮ್ಮಪ್ಪ ಬಡಿದರೆ ಗ೦ಗಾ, ನನ್ನ ಜಡೆಯಲ್ಲಿ ಬ೦ದು ಬಿಡು" — ಎನ್ನುತ್ತಾನೆ ಶಿವ.

"ಬ೦ದರೂ ಬರಬಹುದು. ಆದರೆ ಹೇಗೆ ನ೦ಬಲಿ? ನಿಮ್ಮ ಮನೆಯಲ್ಲಿ ರ೦ಭೆಯಿದ್ದಾಳಲ್ಲ!” ಎ೦ದು ಸ೦ಕೊಚ,ಪಟ್ಟಳು ಗ೦ಗಮ್ಮ.

"ನನ್ನಾಣೆ, ನಿನ್ನಾಣೆ ಅಲ್ಲದೆ ಧರಿಸಿದ ಲಿ೦ಗದಾಣೆ ಮಾಡಿ ಹೇಳುತ್ತೇನೆ. ನನ್ನ ಮನೆಯಲ್ಲಿ ರಂಭೆಯಿಲ್ಲ!” ಎಂದು ಶಿವ ಭರವಸೆ ಕೊಡುತ್ತಾನೆ.

"ಬಂದೇನು? ಆದರೆ ಹೇಗೆ ನಂಬಲಿ? ನಿನ್ನ ಮನೆಯಲ್ಲಿ ಮಡದಿಯಿದ್ದಾಳಲ್ಲ!” ಗಂಗಮ್ಮ ಬೇರೊಂದು ಸಂಶಯ ತೋರಿದರೆ, ಆಗಲೂ ಶಿವನು — ತನ್ನಾಣೆ, ನಿನ್ನಾಣೆ ಅಲ್ಲದೆ ದೇವರಾಣೆ ಮಾಡಿ ಹೇಳುತ್ತೇನೆ ಮನೆಯಲ್ಲಿ ಮಡದಿಯಿಲ್ಲವೆಂದು, ಹೇಳುತ್ತಾನೆ. ಆಗ ಗಂಗಮ್ಮನು ಮೆಲ್ಲನೆ ಶಿವನ ಜಡೆಯಲ್ಲಿ ಅಡಗುವಳು. ಅದನ್ನು ನೊಡಿದ ಗಿಣಿರಾಮನು ಕೂಡಲೇ ಹಾರಿಹೋಗಿ ಗೌರಮ್ಮನಿಗೆ ತಿಳಿಸುತ್ತಾನೆ,

ಆ ವಾರ್ತೆಯನ್ನು ಕೇಳಿ, ಮಲಗಿಕೊಂಡಿದ್ದ ಗೌರಮ್ಮನು ಮೈ ಮುರಿದುಕೊಂಡು ಎದ್ದು, ಗಿಂಡಿಯೊಳಗಿನ ತಣ್ಣೀರಿನಿಂದ ಮುಖ ತೊಳೆದುಕೊಂಡವಳೇ ತನ್ನಣ್ಣನ ಅರಮನೆಗೆ ಹೋದಳು.

ಎಂದೂ ಬಾರದ ಗೌರಮ್ಮ ಇಂದು ಏತಕ್ಕಾಗಿ ಬಂದಳೆಂದು ಬಗೆಯುತ್ತ ಅಣ್ನನು, ಆಕೆಗೆ ಕುಳಿತುಕೊಳ್ಳಲು ಮಣಿ ಚೌಕಿ ಕೊಡಿರೆಂದು ಮಡದಿಗೆ ಹೇಳುತ್ತಾನೆ.