"ನಾನು ಕುಳಿತುಕೊಳ್ಳಲೂ ಬಂದಿಲ್ಲ. ನಿಂತುಕೊಳ್ಳಲು ಬಂದಿಲ್ಲ. ನಾನೊಂದು ಕನಸು ಹೇಳಲು ಬಂದಿದ್ದೇನೆ. ಕೆರೆಯ ಮೇಲೆ ಕೆರೆಹುಟ್ಟಿ, ಕೆರೆಯ ಮೇಲೆ ಒಬ್ಬಾತನು ಬಲೆಹಾಕಿದ್ದಾನೆ" ಎನ್ನುತ್ತಾಳೆ ಗೌರಮ್ಮ.
ಒಗಟಿನಂಥ ಈ ಕನಸು ಅಣ್ಣನಿಗೆ ತಿಳಿದಂತೆ ತೋರಲಿಲ್ಲ. ಅದನ್ನು ಗೌರಮ್ಮ ಸ್ಪಷ್ಟಗೊಳಿಸಿದಳು- ಕೆರೆ ಅಂದರೆ ಶಿವರಾಯ. ಮರ ಅಂದರೆ ಜಡೆ, ಬಲೆಯೆಂದರೆ ಒಳಗಿನ ಶ್ರೀಗಂಗೆ. "
"ದೇಶವನ್ನೇ ಆಳುವವರಿಗೆ ಹೆಂಡರು ಏಸು ಜನರಿದ್ದರೇನು? ನಿನಗೇಕೆ ಆ ಚಿಂತೆ" ಎಂದು ಅಣ್ಣನು ತೀರ್ಪು ಹೇಳಿದನು.
ಆ ಮಾತು ಕೇಳಿ ಗೌರಮ್ಮ ಕಿಡಿಕಿಡಿಯಾದಳು. ಕಿಡಿಚೆಂಡೇ ಆದಳು. ಎಡಹಿ ಬೆರಳಿಗೆ ನೋವಾದುದನ್ನೂ ಲೆಕ್ಕಿಸದೆ ತನ್ನ ಅರಮನೆಯತ್ತ ಸಾಗಿದಳು.
ಶಿವನು ಒಂದೂರಿನಿಂದ ಯತಿಯ ವೇಷದಲ್ಲಿ ಬಂದು, ಗೌರಿಗೆ ನೀರು ಬೇಡುತ್ತಾನೆ. ಒಂದು ಗಿಂಡಿ ಬೇಡಿದರೆ, ಆಕೆ ಎರಡು ಗಿಂಡಿ ನೀರು ಕೊಡುತ್ತಾಳೆ. ಅದನ್ನು ಕಂಡು ಶಿವನು — "ನಿನಗೆ ಪುರುಷರು ಇಬ್ಬರೇನೆ?” ಎಂದು ಚೇಷ್ಟೇಮಾಡುತ್ತಾನೆ.
ಅಯ್ಯಯ್ಯೋ ಶಿವನೇ, ಅಣಕದ ಮಾತೇಕೆ? ಕೆಂಜೆಡೆಯ ಮಣಿಮುಕುಟದಲ್ಲಿರುವ ಸಿರಿಗಂಗೆಗೊಂದು ಗಿಂಡಿ, ನಿನಗೊಂದು ಗಿಂಡಿ" ಅನ್ನುತ್ತಾಳೆ ಗೌರಮ್ಮ.
"ಅಬ್ಬರಣೆ ಸಾಕು. ಎಡೆಮಾಡು ಗೌರಿ" ಎಂದು ಶಿವನು ಹೇಳಿದರೆ, ಎರಡು ಎಡೆಗಳು ಸಿದ್ದವಾಗಿ ಬರುತ್ತವೆ. ಆಗಲೂ ಶಿವನು ಚೇಷ್ಟೆಮಾಡುತ್ತಾನೆ-"ನಿನಗೆ ಇಬ್ಬರೇನೆ ಪುರುಷರು ಗೌರಿ" ಎಂದು. ಗೌರಮ್ಮ ಮತ್ತೆ ಮುಂಚಿನ ಉತ್ತರವನ್ನೇ ಕೊಡುತ್ತಾಳೆ- "ನಿನಗೊಂದು ಎಡೆ, ಜತೆಯಲ್ಲಿರುವ ಸಿರಿಗಂಗೆಗೊಂದು ಎಡೆ. "
ಶಿವನು ತುಂಬ ದಿಗಿಲುಗೊಂಡು-"ಗಂಗೀನ ತಂದರೆ ತಂಗೀನ ತಂದಂತೆ. ಲಿಂಗ ಮುಟ್ಟಿ ಹೇಳುತ್ತೇನೆ ; ಕೆಂಡಮುಟ್ಟಿ ಹೇಳುತ್ತೇನೆ" ಎಂದು ಕ್ರಿಯೆಗೆ ಸಿದ್ಧನಾಗುತ್ತಾನೆ.
ಗೌರಮ್ಮ ಬೇರೊಂದು ಹಂಚಿಕೆ ತೆಗೆಯುತ್ತಾಳೆ. ಬೆಳ್ಳಿಯ ಬಟ್ಟಲಲ್ಲಿ ಎಳ್ಳೆಣ್ಣೆ ತೆಗೆದು ತಂದು ಶಿವನ ಜಡೆಯನ್ನು ಹೊಸಲು ಆರಂಭಿಸುತ್ತಾಳೆ. ಗೌರಮ್ಮನು ತಲೆಯಿಂದ ಸೊಂಟಿನತ್ತ ಎಣ್ಣೆಹೂಸುತ್ತ ಬರಲು, ಗಂಗೆ ಅದಕ್ಕಿಂತ ಕೆಳಗಡೆ