ಪುಟ:ಉಮರನ ಒಸಗೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩

ದಲ್ಲಿ ಸಂಸ್ಕೃತ ಬೋಧಕನಾದನು. ಆತನಿಗೆ ಪಾರಸೀ ಅರಬ್ಬೀ ಭಾಷೆಗಳ ಪರಿಚಯವೂ ಚೆನ್ನಾಗಿತ್ತು. ಈತನ ಮೂಲಕ ಫಿಟ್ಸ್-ಜೆರಲ್ಡನಿಗೆ ಉಮರನ ಮತ್ತು ಇತರ ಪಾರಸೀ ಕವಿಗಳ ಪರಿಚಯವು ದೊರೆಯಿತು.

⁠ಫಿಟ್ಸ್-ಜೆರಲ್ಡನ ಪಾರಸೀ ಅನುವಾದಗಳಲ್ಲಿ ಜಾಮೀ ಕವಿಯ "ಸಲಾಮಾನ್ ಮತ್ತು ಅಬ್ಬಾಲ್" ಎಂಬುದು ಮೊದಲು (೧೮೫೬) ಪ್ರಕಟವಾದುದು ; ಅತ್ತರ್ ಕವಿಯ "ಪಕ್ಷಿ ಪರಿಷತ್ತು" ಎಂಬುದು ಕಡೆಯದು ; ಇವೆರಡರ ನಡುವಿನದು ಉಮರನ "ರುಬಾಯ್ಯಾತ್". ಇದು ಫಿಟ್ಸ್-ಜೆರಲ್ಡನ ಪಾರಸೀ ಅನುವಾದಗಳಲ್ಲಿ ಮಾತ್ರವೇ ಅಲ್ಲ, ಆತನ ಎಲ್ಲ ಕೃತಿಗಳಲ್ಲಿಯೂ ಅತ್ಯಂತ ಪ್ರಸಿದ್ಧವಾದುದು. ಆತನು ಇನ್ಯಾವುದನ್ನೂ ಬರೆಯದೆ ಇದ್ದಿದ್ದರೂ, ಆತನ ಕೀರ್ತಿಯನ್ನು ಶಾಶ್ವತವಾಗಿ ಸ್ಥಾಪಿಸಲು ಇದೊಂದೇ ಸಾಕಾಗಿರುತ್ತಿತ್ತು. ಇದು ಉಮರನ ಕಾವ್ಯದ ಆದ್ಯಂತ ರೂಪವಲ್ಲ ; ಅದರಲ್ಲಿ ಒಂದು ನೂರರಷ್ಟು ಪದ್ಯಗಳನ್ನು ಮಾತ್ರ ಫಿಟ್ಸ್-ಜೆರಲ್ಡನು ಆರಿಸಿಕೊಂಡು ಅವುಗಳಿಂದ ಭಟ್ಟಿಯಿಳಿಸಿ ತೆಗೆದ ಸಾರ.

⁠ಫಿಟ್ಸ್-ಜೆರಲ್ಡನು "ರುಬಾಯ್ಯಾತಿ"ನ ತನ್ನ ಇಂಗ್ಲಿಷ್, ಛಾಯಾನುವಾದವನ್ನು ಪ್ರಕಟನೆಗೆಂದು ೧೮೫೮ರಲ್ಲಿ ಒಂದು ಮಾಸ ಪತ್ರಿಕೆಗೆ ಕಳುಹಿಸಿದನು. ಒಂದು ವರ್ಷವಾದರೂ ಆ ಪತ್ರಿಕೆಯವರು ಅದನ್ನು ಪ್ರಕಟಿಸದಿರಲು, ೧೮೫೯ರಲ್ಲಿ ಆತನು ಅದನ್ನು ಅವರಿಂದ ಹಿಂದಕ್ಕೆ ತರಿಸಿಕೊಂಡು, ತಾನೇ ಪುಸ್ತಕ ರೂಪದಲ್ಲಿ ೨೫೦ ಪ್ರತಿ ಅಚ್ಚು ಮಾಡಿಸಿ ಪ್ರಕಟಪಡಿಸಿದನು. ಬಹುಕಾಲ ಆ ಪುಸ್ತಕವನ್ಯಾರೂ ಲಕ್ಷಿಸಲಿಲ್ಲ. ಕಡೆಗೆ ಪುಸ್ತಕದ ಅಂಗಡಿಯವನು ಅದು ಮಾರಲಾರದ ಸರಕೆಂದು, ಅದರ ಬೆಲೆಯನ್ನು ಐದು ಷಿಲಿಂಗಿನಿಂದ ಒಂದು ಪೆನ್ನಿಗೆ ಇಳಿಸಿ, ಅದರ ಕಟ್ಟುಗಳನ್ನು ಒಂದು ಮೂಲೆಯಲ್ಲಿ ಹಾಕಿದ್ದನು. ಬಹುಕಾಲದಮೇಲೆ ಒಂದು