ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

vi

ಹುಟ್ಟುವುದಕ್ಕೆ ಸೂಲಗಿತ್ತಿಯ ಸ್ಥಾನದಲ್ಲಿದ್ದಾರೆಂದರೆ ಅವರ ಪರಿಚಯವಿದ್ದವರೆಲ್ಲರೂ ಒಪ್ಪಬೇಕಾಗಿದೆ. ಈ ರೀತಿಯ ಪ್ರಚಾರಕಾರ್ಯದ ದೆಸೆಯಿಂದ ಅವರ ಹೆಸರು ಅಖಿಲ ಕರ್ನಾಟಕದಲ್ಲಿ ಉಜ್ವಲವಾಗಿ ಬೆಳೆಗಿದೆ, ಅವರು ಆಜನ್ಮಭೋಧಕರು, ಯಾವುದೊಂದು ವಿಷಯವನ್ನೂ ಸುಲಭ ರೀತಿಯಲ್ಲಿ ಬೋಧಿಸುವುದಕ್ಕೆ ಯೋಗ್ಯತೆ ಯುಳ್ಳವರು. ಅವರ ಪ್ರಚಾರಕಾರ್ಯದ ಪರಿಣಾಮವು ಕನ್ನಡ ಸಾಹಿತ್ಯದ ಏಳ್ಗೆಯಲ್ಲಿ ಚಿರಸ್ಥಾಯಿಯಾಗಿ ನಿಲ್ಲುವುದೆಂಬದರಲ್ಲಿ ಸಂದೇಹವಿಲ್ಲ.

ಇವರ ವಿದ್ವತ್ತೆಯ ಪರಿಚಯ, ಇವರ ರಸಭರಿತವಾದ ಮತ್ತು ನಿನೋದಕರ ಸಂಭಾಷಣೆ ಇವುಗಳಿಂದ ಮೈಸೂರು, ದಕ್ಷಿಣ ಮಹಾರಾಷ್ಟ್ರಗಳಲ್ಲಿರುವ ಕನ್ನಡ ಸಾಹಿತಿಗಳ ಸ್ನೇಹವು ಅವರಿಗೆ ಆದದ್ದಲ್ಲದೆ, ಅವರ ಶಿಕ್ಷಣ ಸಾಮರ್ಥ್ಯವನ್ನು ಗೊತ್ತು ಹಚ್ಚಿದ ಧಾರವಾಡ ಜಿಲ್ಲೆಯ ಪಾಲಾ ಇನ್ಸ್‌ಪೆಕ್ಟರರಾಗಿದ್ದ ಮಿ. ವಕೀಲರ ಪ್ರಯತ್ನದಿಂದ ಜರುಗಿದ ಉಪಾಧ್ಯಾಯರ ಸಮ್ಮೇಲನದಲ್ಲಿ ಇಂಗ್ಲಿಷು, ಗಣಿತ, ಮುಂತಾದ ವಿಷಯಗಳಲ್ಲಿ ಮಾದರಿ ಪಾಠ ಶ್ರೀಯುತ ಪಂಜೆ ಮಂಗೇಶರಾಯರಿಂದ ಕೊಡಿಸಿ ಪ್ರಾಥಮಿಕ ಉಪಾಧ್ಯಾಯರಲ್ಲಿ ಹೊಸ ಹುರುಪು ಬರುವಂತೆ ಮಾಡಲಾಯಿತು.

ಹಾಗೆಯೆ, ಹಿಂದೆ ಎರಡು ಮೂರು ಸಲ ಬಂದ ಆಮಂತ್ರಣವನ್ನು ಶ್ರೀ ಮಂಗೇಶರಾಯರು ತಮ್ಮ ಸಭಾವಿಕವಾವ ವಿಷಯದಿಂದ ಅಂಗೀಕರಿಸದೆ ಇದ್ದರೂ ರಾಯಚೂರಿನಲ್ಲಿ ಜರುಗಿದ ಇಪ್ಪತ್ತನೆಯ ಕರ್ನಾಟಕ ಪರಿಷತ್ತಿನ ಅಧಿವೇಶನದಲ್ಲಿ ಹಲವು ಕನ್ನಡ ಸಾಹಿತಿಗಳ ಒತ್ತಾಯದಿಂದ ಅವರು ಅಧ್ಯಕ್ಷ ಸ್ಥಾನವನ್ನು ಅಂಗೀಕರಿಸಿದರು. ಮತ್ತು ಅಲ್ಲಿ ಅವರು ಕೊಟ್ಟ ಆಧ್ಯಕ್ಷ ಭಾಷಣವು ಕನ್ನಡ ಸಾಹಿತ್ಯದ ದಿಗ್ದರ್ಶನ ಮಾಡುವುದರಲ್ಲಿ ಅಪೂರ್ವವಾಗಿತ್ತು ಎಂದು ಕನ್ನಡಿಗರೆಲ್ಲರ ಅಭಿಪ್ರಾಯ.

ಇವರು ಮದ್ರಾಸು ಯುನಿವರ್ಸಿಟಿಯ ಕನ್ನಡ ಬೋರ್ಡಿನಲ್ಲಿ ಪ್ರಮುಖ ಮೆಂಬರರಾಗಿದ್ದು, ಪಠ್ಯಪುಸ್ತಕಗಳಲ್ಲಿ ಆಧುನಿಕ ಗ್ರಂಥಗಳಿಗೆ ನ್ಯಾಯವಾದ ಸ್ಥಾನ ಸಿಗುವಂತೆ ಸಾಹಸಮಾಡುತ್ತಿರುವರಲ್ಲದೆ, ಮೈಸೂರು ಯುನಿವರ್ಸಿಟಿಯವರು ಇತ್ತಲಾಗೆ ಮೈಸೂರು ಯುನಿವರ್ಸಿಟಿಯ ಕನ್ನಡ ಬೋರ್ಡಿನಲ್ಲಿ ಇವರಿಗೆ ಸ್ಥಾನ ಕೊಟ್ಟಿರುವರು. ಮತ್ತು ಕುಮಾರವ್ಯಾಸನ ಭಾರತವನ್ನು ಕಥಾಭಾಗವೂ ಕವಿಯ ಚಮತ್ಕೃತಿಯೂ ತೋರಿಬರುವಂತೆ ಸಂಕ್ಷೇಪಿಸಿ ಬರೆಯುವುದಕ್ಕೆ ಇವರನ್ನು ಎಡಿಟರರಾಗಿ ನಿಯಮಿಸಿದ್ದಾರೆ. ಅನಂತಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಇವರು ಪರ್ಯಟನ ಮಾಡುತ್ತಿರುವಾಗ ಇವರಿಂದ ಕನ್ನಡ ಸಾಹಿತ್ಯದ ವಿಚಾರಗಳನ್ನು ಕುರಿತು ಭಾಷಣಗಳನ್ನು ಕೊಡಿಸಿ ಕನ್ನಡಿಗರಲ್ಲಿ ಸಾಹಿತ್ಯಾಭಿಮಾನವು ಕಳೆಯೇರುವುದಕ್ಕೆ ಪ್ರಯತ್ನಿಸಿದ್ದಾರೆ.

ಈ ಸುಪ್ರಸಿದ್ಧ ಸಾಹಿತಿಗಳು ಈಗ ದಿವಂಗತರಾಗಿದ್ದಾರೆ.