ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

— 5 —

ಅವರು ಸಮ್ಮತಿಸಲಿಲ್ಲ. ದುರ್ಗಾವತಿಯನ್ನು ಅಳಿಯನ ಕೈಗೆ ಖಡ್ಗ ಧಾರಾಪೂರ್ವಕವಾಗಿ ಕೊಡಬೇಕೆಂದು ನಿಶ್ಚಯಿಸಿದನು. ಕೂಡಲೇ ಇತ್ತಂಡಗಳ ಸೇನೆಗಳು ಸನ್ನದ್ಧವಾಗಿ ಬಂದುವು; ಸ್ವಯಂವರಮಂಟಪವು ಸಮರಭೂಮಿಯಾಯಿತು; ಅಳಿಯನಿಗೂ ಮಾವನಿಗೂ ಕಾಳಗವಾಯಿತು. ಚಂದೇಲನು ಸೋತುಹೋದನು, ವಿಜಯಿಯಾದ ದಳಪತಿ ಶಹನು ರಮಣೀರತ್ನವನ್ನು ಹಾರಿಸಿಕೊಂಡು ಹೋದನು.

ಆದರೆ ದುಗಾವತಿಯ ಸಹವಾಸಸುಖವನ್ನು ಚಿರಕಾಲ ನು ಭವಿಸುವುದನ್ನು ದಳಪತಿಶಹನ ಹಣೆಯಲ್ಲಿ ವಿಧಾತನು ಬರೆಯಲಿಲ್ಲ. ದುರ್ಗಾವತಿಯಲ್ಲಿ ಪುತ್ರೋತ್ಸವವಾದ ಸ್ವಲ್ಪ ಕಾಲದಲ್ಲಿಯೇ ಶಕನು ಕಾಲವಶನಾದನು. ಗಡಾಮಂಡಲದ ಮೇಲೆ ಸ್ವಲ್ಪ ಕಾಲದವರೆಗೆ ಅಂಧಕಾರವು ಅಚ್ಛಾದಿತವಾಯಿತು. ಗಡಾಮಂಡಲಕ್ಕೆ ಉಂಟಾದ ಈ ದುರ್ಗತಿಯನ್ನು ನೋಡಿ ಅಕ್ಷರು ಸಮಯವನ್ನು ಎದುನೋಡುತಿದ್ದನು. ಕೂಡಲೇ ದುರ್ಗಾವತಿಯು ತನಗೆ ಒದಗಿದ ಕಷ್ಟ ಸಂಕಷ್ಟವನ್ನು ಮರೆತು ಬಿಟ್ಟಳು; ಪತಿವಿಯೋಗದಿಂದ ಉಂಟಾದ ಕಣ್ಣೀರುಗಳನ್ನು ಕಣ್ಣುಗಳಿಂದ ಒರಸಿಬಿಟ್ಟಳು; ದುಃಖಸೂಚಕವಾದ ವಸನಗಳನ್ನು ತೆಗೆದಿಟ್ಟಳು. ಪ್ರಜಾಪರಿಪಾಲನದಲ್ಲಿಯ, ಸಂಸ್ಥಾನಾಭಿವೃದ್ಧಿಯಲ್ಲಿಯ, ಬಾಲಕನ ಅಭ್ಯುದಯದಲ್ಲಿಯೂ ತನ್ನ ಮನಸ್ಸನ್ನು ಊರಿದಳು. ಬಾಲಕನಾದ ವೀರನರೇಂದ್ರನು ಪ್ರಾಯಕ್ಕೆ ಬರುವ ವರೆಗೆ ಅಸಾಧಾರಣ ಸ್ತ್ರೀಯಾದ ದುರ್ಗಾವತಿಯು ರಾಜಕಾರ್ಯಸೂತ್ರಗಳನ್ನು ತನ್ನ ಕೈಯಲ್ಲೇ ಹಿಡಿದುಕೊಂಡಳು. ಅವಳ ಆಳಿಕೆಯಲ್ಲಿ ಮಾರ್ಗಗಳು ಸಂಸ್ಥಾನವನ್ನು ಸೀಳಿ ಹೋದುವು. ಅಲ್ಲಲ್ಲಿ ಪ್ರಯಾಣಸ್ಥರಿಗೆ ಅನುಕೂಲವಾದ ವಾಸಿಗಳೂ ಪ್ರಪಾಶಾಲೆಗಳೂ ತಲೆದೋರಿದುವು. ಕೆರೆ ಕಾಲುವೆಗಳು ವ್ಯವಸಾಯಕ್ಕೆ ಸಹಾಯಕವಾಗಿ ಹರಿದು ಹೋದುವು. ರಾಜ್ಯದ ಕಂದಾಯವು ಇಮ್ಮಡಿಯಾಯಿತು. ಗಡಾಮಂಡಲವು ಉನ್ನತಿಗೆ ಏರಿತು. ಪ್ರಜೆಗಳಿಗೆ ತಾಯಿಯಂತಿದ್ದ ದುರ್ಗಾವತಿಯ ಆಳಿಕೆಯಲ್ಲಿ ಸುಖವಂತರಾದ ಜನರೆಲ್ಲರು ತಮ್ಮ ಅಧಿಪತಿಯ ಅಕಾಲಿಕ ಮರಣದುಃಖವನ್ನು ಕ್ರಮೇಣ ಮರೆತುಬಿಟ್ಟರು.