ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 11 -

ವೀರಮತಿ.

ಮಧ್ಯಾಹ್ನ ಸೂರ್ಯನು ಆಕಾಶವಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲ್ಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ ಬೆನ್ನ ಮೇಲಿನ ನೊಳಗಳನ್ನು ಝಾಡಿಸುತ್ತಿದ್ದುವು. ಹಕ್ಕಿಗಳು ಮರದ ಎಲೆಗಳಲ್ಲಿ ಹುದುಗಿಕೊಂಡು, ಸುಖವಾಗಿ ನಿದ್ದೆ ಹೋಗುತ್ತಿದ್ದುವು. ಕಾಗೆಯು ಅತ್ತಿತ್ತ ಅರಚುತ್ತ ಮರದಿಂದ ಮರಕ್ಕೆ ಹಾರುತ್ತಲಿತ್ತು. ಗಿಡುಗನು ಗಗನಮಧ್ಯದಲ್ಲಿ ಮಂಡಳಿಸಿ, ನೆಲದ ಮೇಲೆ ಸುಳಿಯುವ ಕೊಳ್ಳೆಯನ್ನು ತೀಕ್ಷ್ಣದೃಷ್ಟಿಯಿಂದ ನೋಡಿ, ಫಕ್ಕನೆ ಕೆಳಕ್ಕೆ ಹಾರಿಬಂದು, ಹತಾಶನಾಗಿ ಸಮೀಪದಲ್ಲಿದ್ದ ಉನ್ನತವಾದ ಮಂದಿರದ ಸೂರುಗಳಲ್ಲಿ ಕುಳಿತುಕೊಳ್ಳುತಿತ್ತು. ದೇವಗಿರಿಯ ಅರ ಮನೆಯ ಬಳಿಯಲ್ಲಿ ಕಾವಲುಗಾರರು ಬಹಳ ಎಚ್ಚರಿಕೆಯಿಂದ ಸಹರೇ ಮಾಡುತ್ತಿದ್ದರು. ಅರಮನೆಯಲ್ಲಿ ಜನರು ಕಾರ್ಯಗೌರವದಿಂದ ಹೋಗುತ್ತ ಬರುತ್ತ, ಅಲ್ಲಲ್ಲಿ ಗುಂಪು ಕೂಡಿ ನಿಂತು, ತನ್ನೊಳಗೆನೇ ಏನನ್ನೋ ವಿಚಾರ ಮಾಡುತ್ತಿದ್ದರು. ರಾಜಮಂದಿರದ ಕಿರುಬಾಗಿಲನಿಂದ ಒಂದು ಪಲ್ಲಕಿಯು ಹೊರಕ್ಕೆ ಬಂದಿತು. ಪ್ರಜೆಗಳೆಲ್ಲರು ವಿಶೇಷವಾದ ಕಾರ್ಯದಲ್ಲಿ ಮಗ್ನರಾದುದರಿಂದ, ಪಲ್ಲಕ್ಕಿಯನ್ನು ಯಾರೂ ಲಕ್ಷಿಸಲಿಲ್ಲ. ಅಂದಣವು ತಪ್ತವಾದ ರಾಜಮಾರ್ಗವನ್ನು ಬಿಟ್ಟು, ನಿರ್ಜನವಾದ ಶೀತಲವಾದ ರಹಸ್ಯಮಾರ್ಗವನ್ನು ಹಿಡಿದುಕೊಂಡು ಹೋಯಿತು. ಪಲ್ಲಕ್ಕಿಯು ಕೋಟೆಯನ್ನು ಸಮೀಪಿಸುತ್ತಲೇ ಪಹರೆಯವನು ಅದನ್ನು ನೋಡಿ, ಖಡ್ಗವನ್ನು ಎತ್ತಿ ಹಿಡಿದು, ಅದನ್ನು ಅಡ್ಡಿಮಾಡದೆ ಹೊರಕ್ಕೆ ಬಿಟ್ಟನು. ಅಂದಣವು ದೇವಗಿರಿಯ ಕೋಟೆಯನ್ನು ಅತಿಕ್ರಮಿಸಿ, ಅದರ ಬಹಿರ್ಭಾಗದಲ್ಲಿದ್ದ ಅರಣ್ಯವನ್ನು ಸೇರಿತು. ಕೊನೆಗೆ ವಿಜನವಾದ ಭೀಕರವಾದ ಅರಣ್ಯ ಮಧ್ಯದಲ್ಲಿದ್ದ ಕಾಳಿಕಾ ದೇವಸ್ಥಾನದ ಬಳಿಯಲ್ಲಿ ಆಳುಗಳು ಪಲ್ಲಕ್ಕಿಯನ್ನು ಇಟ್ಟು ಹೋದರು. ಕೂಡಲೇ ರಮಣಿಯರಿಬ್ಬರು ಅಂದಣದಿಂದ ಕೆಳಕ್ಕೆ ಇಳಿದು, ಕಾಲ್ನಡೆಯಾಗಿ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ಸಿದ್ಧರಾಗಿ, ತಮ್ಮ ವಸ್ತ್ರಾಲಂಕಾರಗಳನ್ನು ಸರಿಗೊಳಿಸುವುದಕ್ಕೆ ಒಂದು ಮುಹೂರ್ತ ಅಲ್ಲಿಯೇ ತಡೆದರು.