ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 19 -

ಹೇಳಿದನು. ಈ ಅಭಿಪ್ರಾಯಗಳಲ್ಲಿ ಯಾವುದನ್ನು ಸ್ವೀಕರಿಸಬೇಕೆಂದು ತಿಳಿಯದೆ, ರಾಜನು ವೀರಮತಿಯ ಮುಖವನ್ನು ದೃಷ್ಟಿಸಿದನು. ಪ್ರಾಚೀನ ಕಾಲದಲ್ಲಿ ಭಾರತಸ್ತ್ರೀಯರ ಸ್ವಾತಂತ್ರ್ಯಕ್ಕೆ ಯಾವುದೊಂದು ನಿರ್ಬಂಧವಿಲ್ಲದೆ ಇದ್ದುದರಿಂದ, ವೀರರಮಣಿಯರು ಇಂತಹ ಸಂದರ್ಭಗಳಲ್ಲಿ ತಮ್ಮ ಆಲೋಚನೆಯಿಂದಲೂ, ಆಯುಧದಿಂದಲೂ ರಾಜ್ಯಾಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದರು. ಧಾಮದೇವನ ಸಾಕೂತದೃಷ್ಟಿಯಿಂದ ತನ್ನನ್ನು ನೋಡುತ್ತಲೇ ವೀರಮತಿಯು ಉತ್ಸಾಹಿತಳಾಗಿ ಹೀಗೆಂದಳು:- “ನನ್ನ ಪ್ರಾಣ ವಲ್ಲಭನ ಅಭಿಪ್ರಾಯವು ವಿದಿತವಾಗಿದೆ. ಅಲ್ಲಾವುದ್ದೀನನನ್ನು ಈಗ ಜಾರಬಿಟ್ಟರೆ, ರಕ್ತದ ರುಚಿಹತ್ತಿದ ಹುಲಿಯು ಮತ್ತೆ ಮತ್ತೆ ಗ್ರಾಮಗಳಿಗೆ ಬಂದು, ಹಳ್ಳಿಗರನ್ನು ಹೆದರಿಸುವಂತೆ; ಅವನು ಮರಳಿಮರಳಿ ಇಲ್ಲಿಗೆ ಬರುವನಲ್ಲವೆ? ಇದಲ್ಲದೆ ನನ್ನ ಜನ್ಮದಾತಾರನಾದ ತಂದೆಯು ಶತ್ರುವಿಂದ ರಣರಂಗದಲ್ಲಿ ಬಿದ್ದು ಹೋದನೆಂಬ ದುಃಖಾಗ್ನಿಯು ನನ್ನ ಹೃದಯವನ್ನು ಪದೇಪದೇ ದಹಿಸುತ್ತಿರುವುದು. ಶತ್ರುವಿನ ರಕ್ತ ಸೇಚನದಿಂದ ಈ ಅಗ್ನಿಯು ಶಾಂತವಾಗಬೇಕಾದುದರಿಂದ, ನನ್ನ ಪ್ರಾಣೇಶ್ವರನು ಸೈನ್ಯದ ವಿಶೇಷ ಭಾಗವನ್ನು ಈ ರಾತ್ರಿ ಕೋಟೆಯ ಹೊರಕ್ಕೆ ಕೊಂಡುಹೋಗುವಂತೆ ಆಪ್ಪಣೆ ಯಾಗಬೇಕೆಂದು ಪ್ರಾರ್ಥಿಸುವೆನು. ಇವನ ಸಹಾಯಕಳಾಗಿ ಹೋಗಲಿಕ್ಕೆ ನನಗೂ ಅಜ್ಞೆಯಾಗಬೇಕೆಂದು ವಿಜ್ಞಾಪಿಸುವೆನು.” ರಾಮ ದೇವನು ಮೊದಲಿನ ಎರಡು ಯುದ್ಧಗಳಲ್ಲಿಯೂ ಕೃಷ್ಣರಾಜನ ಸಾಹಸವನ್ನೂ ಚಾತುರ್ಯವನ್ನೂ ಕಣ್ಣಾರೆ ಕಂಡಿದ್ದುದರಿಂದ, ಕೃಷ್ಣರಾಜನು ಸೇನೆಯ ಹೆಚ್ಚಿನ ಭಾಗವನ್ನು ಆ ರಾತ್ರಿ ಹೊರಗೆ ಕೊಂಡುಹೋಗಿ ಯುದ್ಧ ಮಾಡುವುದಕ್ಕೆ ರಾಮವೇವನು ಸಮ್ಮತಿಸಿ, ತಾನು ಅವನೊಡನೆ ಹೊರಡಲಿಕ್ಕೆ ಸಿದ್ಧನಾದನು. ಆದರೆ ವೀರಮತಿಯು ಸೈನ್ಯದೊಡನೆ ಹೊರಕ್ಕೆ ಹೋಗುವುದು ಯೋಗ್ಯವಲ್ಲವೆಂದು ಬಹುಪಕ್ಷದವರ ಮತವಾಯಿತು.

ದೇವಗಿರಿ ದುರ್ಗವು ಪುರಾತನ ಕಾಲದಲ್ಲಿ ಮಹಾಪ್ರಖ್ಯಾತಿಗೊಂಡಿತು. ಕಡಲು ಮಟ್ಟಕ್ಕಿಂತ ೬೪೦ ಅಡಿ ಎತ್ತರಕ್ಕೆ ಏರಿದ ಏಕಾಕಿಯಾದ ಪರ್ವತದ ಮೇಲೆ ಅದು ಇದ್ದಿತ್ತು. ಈ ಪರ್ವತವು ಸೂಚ್ಯಾಕಾರವಾಗಿದ್ದು (cone-shaped) ಸುತ್ತಲೂ ಪ್ರಪಾತಮಯವಾದ ಬಂಡೆಗಳಿಂದ ಭದ್ರವಾಗಿತ್ತು