ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 21 -

ಆಲೋಚಿಸುತ್ತ ಕುಳಿತುಕೊಂಡಿದ್ದನು. ಬಳಿಕ ಹೊರಗೆ ಬಂದು ಯಾರನ್ನೋ ಹುಡುಕಿದಂತೆ ಅತ್ತಿತ್ತ ನೋಡಿಕೊಂಡು ನಿಂತನು. ಶೀತಲವಾದ ಗಾಳಿ ಬೀಸುತ್ತಿತ್ತು. ಆಕಾಶದಲ್ಲಿ “ಸಹಸ್ರ ರತ್ನಗಳು” ಮಿನುಗುತ್ತಿದ್ದುವು. ಯುವಕನು ಪುನಃ ಡೇರೆಯೊಳಗೆ ಹೋಗಿ ಕುಳಿತುಕೊಂಡನು. ಯುವಕನ ಹೆಸರು ಮಾಲಿಕ್ ನಾಯಬ್ ಕಾಫರ್. ಹಿಂದುಸ್ಥಾನದ ಇತಿಹಾಸದಲ್ಲಿ ಈ ಹೆಸರೇ ಮಾಲಿಕ್ ಕಾಫರ್ ಎಂದು ಸಂಕ್ಷೇಪವಾಗಿರುವುದು. ಈ ಮಾಲಿಕ್ ಕಾಫರನು ಮೊತ್ತಮೊದಲು ಅಲ್ಲಾವುದ್ದೀನನ ಗುಲಾಮನಾಗಿದ್ದು, ಅವನ ದಯೆಯಿಂದಲೇ ಸೈನ್ಯದಲ್ಲಿ ಉಚ್ಚ ಪದವಿಯನ್ನು ಪಡೆದಿದ್ದನು. ಮುಸಲ್ಮಾನರ ದುರ್ಗುಣಗಳೆಲ್ಲಾ ಇವನಲ್ಲಿ ಹಾಸು ಹೊಕ್ಕಾಗಿದ್ದುವು. ಅಲ್ಲಾವುದ್ದೀನನು ಈ ಪಾಪಿಯಲ್ಲಿ ಹೆಚ್ಚಾದ ವಿಶ್ವಾಸವಿಟ್ಟಿದ್ದನು; ಅವನನ್ನೇ ತನ್ನ ಸೇನಾಧಿಪತಿಯನ್ನಾಗಿ ಮಾಡಿದ್ದನು; ಅವನ ವಚನವನ್ನು ಕುರಾನಿನಂತೆ ಪಾಲಿಸುತ್ತಿದ್ದನು. ಅಲ್ಲಾವುದ್ದೀನನ್ನು ರಾಜ್ಯಾಭಿಲಾಷೆಯಿಂದ ಲೋಕಾಂತರಕ್ಕೆ ಕಳುಹಿಸಿದ ವಿಶ್ವಾಸಘಾತಕನು ಈತನೇ. ಮಾಲಿಕ್ ಕಾಫರನು ಹೊರಕ್ಕೆ ಬಂದು ಅಲ್ಲಲ್ಲಿ ವಿಹರಿಸುತ್ತಿದ್ದನು. ರಾತ್ರಿಯು ಮೆಲ್ಲಮೆಲ್ಲನೆ ಸರಿಯುತ್ತ ಬಂದಿತು. ಮುಸಲ್ಮಾನರ ಸೈನ್ಯದಲ್ಲಿ ಒಬ್ಬಿಬ್ಬರು ಎಚ್ಚರವಾಗುತ್ತಿದ್ದರು. ಮಾಲಿಕ್ ಕಾಫರನು ಡೇರೆಯ ಸಮೀಪದಲ್ಲಿದ್ದ ಮರದ ತೋಪಿನ ಬಳಿಯಲ್ಲಿ ಬಂದು ನಿಂತನು. ಅಷ್ಟರಲ್ಲಿ ಅವನ ಇದಿರಿಗೆ ಯಾರೋ ಒಬ್ಬನು ಕಾಲ್ನಡೆಯಾಗಿ ಬರುತ್ತಿದ್ದನು. ಮಾಲಿಕ್ ಕಾಫರನು ಆಗಂತುಕನನ್ನು *[೧] ನೋಡಿ ಸಲಾಂ ಮಾಡಿದನು.

ಮಾಲಿಕ್ ಕಾಫರನು ಆಗುಂತುಕನ ಬಳಿಗೆ ಬಂದು, “ನಿನ್ನೊಡನೆ ಮತ್ತಾರೂ ಬಂದಿದ್ದರೇ?” ಎಂದನು.

ಆಗಂತುಕನು ಸುತ್ತಲೂ ನೋಡುತ್ತ, “ಇಲ್ಲ. ನಾನು ಬಂದುದು ಯಾರೂ ತಿಳಿಯಲು ಕಾರಣವಿಲ್ಲ” ಎಂದನು.

ಮಾಲಿಕ್ ಕಾಫರ್:- “ನಿನ್ನ ಹಿಂದೆಯೇ ಏನೋ ದೂರದಲ್ಲಿ ನಿನ್ನ ನೆರಳಂತೆ ತೆವೀರಿತು. ಇಷ್ಟು ವಿಳಂಬವೇಕಾಯಿತು?”

ಆಗಂತುಕ:- “ಮಧ್ಯಾಹ್ನದಲ್ಲಿ ನಿನ್ನನ್ನು ನೋಡಿದ ಬಳಿಕ ಅರಮನೆಯ ಕಾರ್ಯಗೌರವದಿಂದ ತಳುವಿದೆನು.”

  1. *ಬಂದವನು.