ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 23 -

ಆಗಂತುಕ:- "ರಾಜನಾದ ಬಳಿಕ 'ನಾನು ವಿವಾಹವಾಗಬೇಕೆಂದು ಯೋಚಿಸಿರುವೆನು. ಅಲ್ಲಾವುದ್ದೀನನ ಸಮಕ್ಷಮದಲ್ಲಿಯೇ ನಾನು ವೀರಮತಿಯನ್ನು ವಿವಾಹವಾಗಬೇಕೆಂದು ನನ್ನ ಆಸೆ.”

ಆಗ ಗಾಳಿಯು ಪುನಃ “ಚಿ! ಚಿ!” ಎಂಬ ಸ್ವರದಿಂದ ಬೀಸಿತು. ಒಂದೊಂದು ಹಕ್ಕಿಯು ಮರದಲ್ಲಿ ಗೂಡಿನಿಂದ “ಧಿಕ್! ಧಿಕ್!” ಎಂದು ಆರಚಿತು. ಮಾಲಿಕ್ ಕಾಫರನು ಆಗಂತುಕನ ಹಸ್ತವನ್ನು ಹಿಡಿದುಕೊಂಡು, “ಕೃಷ್ಣರಾಜ್! ಇನ್ನು ಮುಂದೆ ನೀನೇ ದೇವಗಿರಿಯ ರಾಜನೆಂದು ತಿಳಿ. ನೀನು ಇಲ್ಲಿ ಡೇರೆಯಲ್ಲಿ ತಳುವಿದೆರೆ, ನಾನು ಅಲ್ಲಾವುದ್ದೀನರಿಗೆ ನಿನ್ನನು ಮನ್ನಣೆಗೊಳಿಸಬೇಕೆಂದು ಹೇಳುವೆನು. ವಿಳಂಬವಾದರೆ ಕಾರ್ಯವು ಕೆಟ್ಟು ಹೋಗುವುದು. ಕುದುರೆಯನ್ನು ಹತ್ತಿ ನಾನು ಕೋಟೆಯನ್ನು ಬೆಳಗಾಗುವಷ್ಟರಲ್ಲಿ ಒಳನುಗ್ಗಬೇಕು. ಇಕೋ ಕೋಳಿ ಕೂಗಿತು!” ಎಂದು ಹೇಳಿ ಕುದುರೆಯ ಮೇಲೆ ಹತ್ತಿ ಅದೃಶ್ಯನಾದನು.

ಆಗಂತುಕನು ಮನಸ್ಸಿನಲ್ಲಿ ಏನನ್ನೋ ಯೋಚಿಸುತ್ತ ಮಾಲಿಕ್ನು ಇದ್ದ ಡೇರೆಯ ಕಡೆಗೆ ಮೆಲ್ಲಮೆಲ್ಲನೆ ಕಾಲಿಡುತ್ತಲಿದ್ದನು. ಅಷ್ಟರಲ್ಲಿ "ಹಾ! ದುಷ್ಟಾ” ಎಂಬೊಂದು ಸ್ತ್ರೀ ಧ್ವನಿಯು ಅವನ ಕಿವಿಯನ್ನೂ ಎದೆಯನ್ನೂ ಸೀಳಿಕೊಂಡು ಹೋಯಿತು. ಆಗಂತುಕನು ಪುನಃ ತಿರುಗಿದನು. ಕಣ್ಣು ಮುಚ್ಚುವಷ್ಟರಲ್ಲಿ ಮುಸುಕಿಟ್ಟು, ಒಂದು ವ್ಯಕ್ತಿಯು ಅವನ ಸಮ್ಮುಖಕ್ಕೆ ಹಾರಿಬಂದಿತು. ಆಗಂತುಕನು ತನ್ನ ಕಟಿಯಲ್ಲಿದ್ದ ಕಠಾರಿಯನ್ನು ಈಚೆಗೆ ಸೆಳೆಯುವಷ್ಟರಲ್ಲಿ ವ್ಯಕ್ತಿಯ ಕೈಯಲ್ಲಿದ್ದ ಭರ್ಚಿಯು ಅವನ ಹೊಟ್ಟೆಯನ್ನು ಹಾಯ್ದುಕೊಂಡು ಅವನ ಸೊಂಟದ ಕಠಾರಿಯನ್ನು ಝಣಕ್ಕರಿಸಿತು. ಆಗಂತುಕ ಘಾತವನ್ನು ತಡೆಯಲಾರದೆ, ನೆಲಕ್ಕೆ ಒರಗಿದನು.

ಕೃಷ್ಣರಾಜನು ಕರ್ಕಶವಾದ ಭೂಮಿಯ ಮೇಲೆ ಬಿದ್ದು ಬಿಟ್ಟನು. ಅವನ ದೇಹದ ರಕ್ತದಿಂದ ನೆಲವೇ ಹರಿದುಹೋಗುವಂತಿತ್ತು. ಕೃಷ್ಣರಾಜನ ಪ್ರಾಣವು ಮೆಲ್ಲಮೆಲ್ಲನೆ ದೇಹವನ್ನು ಬಿಟ್ಟು ಹೋಗುತ್ತಿತ್ತು. ಅವನು ಅಸ್ಫುಟ ಸ್ವರದಿಂದ, "ಪ್ರಿಯೇ! ನನ್ನ ಹತ್ಯವನ್ನು ಮಾಡುವುದಕ್ಕೆಂದು ಇಲ್ಲಿಗೆ ಬಂದೆಯೇ?” ಎಂದು ಕೇಳಿದನು.

ವೀರಮತಿಯು ಉದ್ರೇಕಿತಳಾಗಿ "ಯಾವನು ಜನ್ಮಭೂಮಿಯ ಹತ್ಯವನ್ನು ಮಾಡುವನೋ ಅವನು ನಿನ್ನ ಗತಿಗೆ ಹೋಗಲಿ” ಎಂದಳು