ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 20 -

ಕುಳ್ಳನು, ಆಜಾನುಬಾಹುವು; ದೇಹದಲ್ಲಿ ಬಲಾಢ್ಯಾನು; ದೃಢಕಾಯನು; ಅವನ ನಡಿಗೆಯು ರಾಜಗಮನದಂತಿರಲಿಲ್ಲ. ಹೆಜ್ಜೆಯನ್ನು ದೂರವಿಡುತ್ತ ಯುವಕನು ರಾಜಮಾರ್ಗದ ಕೊನೆಯ ತನಕ ಏಕಾಕಿಯಾಗಿ ಹೋದನು. ಹಠಾತ್ತಾಗಿ ಒಂದು ನಿಮಿಷ ಮಾರ್ಗದ ಮೇಲೆ ತಳುವಿದನು. ಚಂದ್ರನು ಅಸ್ತಮಿಸುವಂತಿದ್ದವು. ಎಲ್ಲಿಂದಲೋ ಮಧುರವಾದ ಸ್ವರವು ವಾಯು ತರಂಗಗಳಲ್ಲಿ ತೇಲಿ ಬರುತ್ತಲಿತ್ತು. ಸ್ವರವು ಎಲ್ಲಿಂದ ಬರುವುದೆಂದು ನೋಡುವುದಕ್ಕೆ ತರುಣನು ಕುತೂಹಲಚಿತ್ತನಾಗಿ ಹಿಂದುಮುಂದು ನೋಡಿದನು. ಒಡನೆ ಒಂದು ಮಂದಿರದ ಉಪ್ಪರಿಗೆಯಿಂದ ಸ್ವರವು ಬೀಸುತ್ತಿರುವುದೆಂದು ಬೋಧೆಯಾಗಿ, ಯುವಾನನು ಮಂದಿರದ ಕೆಳಗೆ ಬಂದು ನಿಂತನು. ಹೃದಯಂಗಮವಾದ ಗೀತಸ್ವರವು ಫಕ್ಕನೆ ಸ್ತಬ್ದವಾಯಿತು. ಅಧ್ವಗನು ಮಾರ್ಗದ ಮೇಲೆ ನಿಲ್ಲುವುದು ಸರಿಯಲ್ಲವೆಂದು ಬಗೆದು ಮಹಲಿನ ಬಲಗಡೆಯಲ್ಲಿ ಬೆಳೆದಿದ್ದ ಮರದ ಹಿ೦ದುಗಡೆಯಲ್ಲಿ ಸರಿದು ನಿಂತನು. ಮರದ ಟೊಂಗೆಯೊಂದು ಉಪ್ಪರಿಗೆಯ ಗೋಡೆಯವರೆಗೆ ವಿಸ್ತರಿಸಿತ್ತು. ಹಾಡು ಉಪ್ಪರಿಗೆಯಿಂದ ಪುನಃ ಕೇಳಿಸಿತು.

                  ಇಚ್ಛಿತ ವರನನು | ತುಚ್ಛೀಕರಿಸುತ
                  ಮ್ಲೇಚ್ಛನ ವರಿಸೆಂದು | ಉಚ್ಚರಿಪನೆ ತಂದೆ.||

ಯುವಾಪುರುಷನು ಕ್ಷುಧಿತನಯನನಾಗಿ ಕಾಲಬೆರಳ ಮೇಲೆ ನಿಂತು ತನ್ನ ಕೊರಳನ್ನು ಇಲ್ಲಿ ನೋಡಿದನು. ಯಾರ ಮುಖವೂ ಅವನ ದೃಷ್ಟಿ ಪಥದಲ್ಲಿ ತೋರಲಿಲ್ಲವೆಂದು ಚಿಂತಿಸಿ, ಯುವಕನು ಪಕ್ಕದಲ್ಲಿದ್ದ ಮರವನ್ನು ಹತ್ತಿದನು. ಗೀತದ ಮುಂದಿನ ಮಾತುಗಳು ಸರಿಯಾಗಿ ಕೇಳಿಸುತ್ತಲಿದ್ದುವು.

                  ಎಲ್ಲವ ತೊರೆವೆನು | ನಲ್ಲನ ಸೇರ್ವೆನು
                  ಕಲ್ಲಿನ ಕಾಡೊಳು । ನಿಲ್ಲದ ಪೋಗುವೆ. ||

ಯುವಕನು ಟೊಂಗೆಯನ್ನು ಹತ್ತಿ, ತೆರೆದಿದ್ದ ಕಿಟಕಿಯ ಇದಿರಾಗಿ ತನ್ನ ಮುಖವನ್ನು ಇಟ್ಟು ಇಣಿಕಿ ನೋಡಿದನು, ಉಪ್ಪರಿಗೆಯ ಕೊಟ್ಟಡಿಯಲ್ಲಿ ದೀಪವೊಂದು ಉರಿಯುತ್ತಲಿತ್ತು. ಅದರ ಬಳಿಯಲ್ಲಿ ಮತ್ತೊಂದು ದೀಪವು ಪ್ರಜ್ವಲಿಸುತ್ತಿತ್ತು. ಅನಂಗರಂಗಮಯವಾದ ಅ೦ಗನಾರತ್ನ ಪ್ರದೀಪ.