ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 27 -

ಯುವಕನು ಸದ್ದಾಗದಂತೆ ಮರದ ರೆಂಬೆಯಲ್ಲಿ ಅವಿತುಕೊಂಡು ಕಣ್ಣಿಟ್ಟು ನೋಡಿದನು. ರಮಣಿಯ ಹಾಡು ಅಂತು. ಕಾಮಿನಿಯು ಚಿಂತಾಕುಲಿತಳಾದಂತೆ ಪರ್ಯಂಕದ ಮೇಲೆ ಒರಗಿದ್ದಳು. ಅವಳ ಅವಕುಂಠರಹಿತವಾದ ಮುಖವು ಬಿಳ್ಪೇರಿ ಹೋಗಿತ್ತು. ನನೆದ ಕನ್ನಡಿಯಂತೆ ತೋರುವ ಕಪೋಲವೊಂದು ಕೈದಳವನ್ನು ಆಧರಿಸಿತ್ತು. ಸ್ವಪ್ನ ಸಾಮ್ರಾಜ್ಯದ ಸುಖವನ್ನು ಅನುಭವಿಸುವಂತೆ ಅಧರಗಳಲ್ಲಿ ಮಂದಸ್ಮಿತವು ಅಡಗಿತ್ತು, ಹೊಳೆ ಹೊಳೆವ ಸೀರೆಯ ಅಂಚಲವು ವಕ್ಷೋಭಾಗದಿಂದ ಮೆಲ್ಲಮೆಲ್ಲನೆ ಓಸರಿಸುತ್ತಲಿತ್ತು. ಅವಳ ಆರ್ಧೋನ್ಮೀಲಿತವಾದ ನಯನಗಳ ಕಾಂತಿಯನ್ನು ಕಳುವುದಕ್ಕೆ ದೀಪದ ಕುಡಿಯು ಸಡಗರಿಸುತ್ತಲಿತ್ತು. ದೀಪದ ಅಡಿಯಲ್ಲಿ ಪುಸ್ತಕವೊಂದು ಅರೆತೆರೆದಿತ್ತು. ರಮಣಿಯ ರೂಪಲಾವಣ್ಯಗಳೇನೂ ಅಷ್ಟು ಅಸಾಧಾರಣವಾಗಿರಲಿಲ್ಲ. ಆದರೆ ಅವಳ ಮುಖದಲ್ಲಿಯೂ ಮೈಯಲ್ಲಿಯೂ ಒಂದು ಪ್ರಾಕಾರವಾದ ಚಿತ್ತಾಕರ್ಷಕವಾದ ಸೌಂದರ್ಯವು ಕವಿದಿತ್ತು. ಇವಳಿಗಿಂತಲೂ ರೂಪವತಿಯವರಾದ ಸ್ತ್ರೀಯರು ಎಷ್ಟೋ ನೋಡಸಿಕ್ಕುವರು. ಈ ಮುಖದಲ್ಲಿದ್ದ ಮಾಧುರ್ಯವೂ ಮೋಹನಶಕ್ತಿಯೂ ನೋಡ ಸಿಕ್ಕದು. ಪ್ರಥಮದೃಷ್ಟಿಗೆ ಅವಳ ಮುಖವು ಮನಸ್ಸಿನಲ್ಲಿ ಕನಿಕರವನ್ನೂ ದುಃಖವನ್ನೂ ಉಂಟುಮಾಡುವುದು. ಮುಖವನ್ನು ದರ್ಶಿಸಿದಷ್ಟಕ್ಕೆ ಅಂತರ್ಯದಲ್ಲಿದ್ದ ಕೋಮಲಭಾವವು ಪರಿಸ್ಫುಟವಾಗಿ ನೋಟಕನ ಕಣ್ಮನವನ್ನು ಸೆಳೆದುಬಿಡುವುದು ಎಷ್ಟು ನೋಡಿದರೂ ಮನಸ್ಸು ತೃಪ್ತಿಗೊಳ್ಳದು, ಶಾಂತವಾಗದು. ಅವಳ ಪ್ರಥಮದರ್ಶನದಿಂದ ನೊಟಕನ ಮನಸ್ಸಿನಲ್ಲಿ ಉಂಟಾಗುವ ಸಂತೋಷವು ಪರಕ್ಷಣದಲ್ಲಿಯೇ ಅಲ್ಲಲ್ಲಿ ತೋರಿತೋರದ ವ್ಯಸನಬಿ೦ದುಗಳಿಂದ ಹೆಪ್ಪುಗಟ್ಟಿ ಹೋಗುಲಿತ್ತು. ವೈಶಾಖ ಸೂರ್ಯನ ಆತಪದಿಂದ ಕಂದಿದ ಕುಂದಿದ ಕೋಮಲವಾದ ಬಳ್ಳಿಯೂ ದವಾನಲದ ಉಷ್ಣ ಸ್ಪರ್ಶದಿಂದ ಬಾಡಿ ಬಸವಳಿದ ಕರ್ಣಿಕಾರ ಪುಷ್ಪವೂ ಯಾವ ಪ್ರಕಾರದಲ್ಲಿ ವಿಷಾದ ವಿನೋದಗಳನ್ನು ಮನಸ್ಸಿನಲ್ಲಿ ಒಂದೇ ಸಲ ಉಂಟುಮಾಡುವುವೋ ಆ ಭಾವವನ್ನೇ ಈ ಸುಂದರಿಯ ದರ್ಶನವು ಪ್ರೇಕ್ಷಕರ ಹೃದಯದಲ್ಲಿ ಉಂಟುಮಾಡುತ್ತಲಿತ್ತು.

ಯುವಕನು ದೀಪದ ಜ್ಯೋತಿಯಿಂದ ಇನ್ನೂ ಉಜ್ವಲವಾಗಿ ತೋರುವ