ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 28 -

ಮುಖವನ್ನು ಸ್ವಲ್ಪ ಹೊತ್ತು ದೃಷ್ಟಿಸುತ್ತ ತನ್ನ ತುಟಿಯೊಳಗೆನೇ ಏನನ್ನೋ ಅನ್ನುತ್ತಿದ್ದನು. ಫಕ್ಕ “ಶೈಲಿನಿ” ಎಂಬ ಮಾತು ಅವನ ಬಾಯಿಂದ ಎಚ್ಚರವಿಲ್ಲದೆ ಕೆಳಕ್ಕೆ ಬಿದ್ದಿತು. ನಿಶ್ಯಬ್ದವಾದ ಕೊಟ್ಟಡಿಯೊಳಗೆ ಶೈಲಿನಿ ಎಂಬ ಪದವು ಪ್ರತಿಧ್ವನಿತವಾಯಿತು. ವೃಕ್ಷಾರೋಹಿಯು ಏನೆಂದನೆಂದು ಅರಿಯದೆ ಅಳುಕಿದನು. ಪುನಃ ಯುವಾಪುರಷನು “ಶೈಲಿನಿ!” ಎಂದು ಕೂಗಿ ಕರೆದನು. ಒಡನೆ ರಮಣಿಯು ಎಚ್ಚರವಾದಂತೆ ಕಣ್ಣೊರಸಿ, ತನ್ನನ್ನು ಯಾರೋ ಕೂಗಿ ಕರೆಯುವರೆಂದು ಎಂದು ಎಣಿಸಿ ಸುತ್ತಲೂ ನೋಡಿದಳು. ಕಿಟಕಿಯ ಕಡೆಯಿಂದ ಶೈಲಿನಿ ಎಂಬ ಸ್ವರವು ಮತ್ತೊಮ್ಮೆ ಕೇಳಿಸಿತು. ಯುವತಿಯು ಸಂತೋಷಚಿತ್ತಳಾಗಿ ತನ್ನ ಸೀರೆಯ ಸೆರಗನ್ನು ಸರಿಗೊಳಿಸುತ್ತ, ಗವಾಕ್ಷದ ಕಡೆಗೆ ಹೆಜ್ಜೆಯನ್ನಿಟ್ಟಳು. ನಿದ್ರಾಭಂಗದಿಂದಲೊ ಭಯದಿಂದಲೋ ಆಯಾಸದಿಂದಲೊ ತರುಣಿಯ ಕಾಲು ತಡವರಿಸುತ್ತಲಿತ್ತು. ಅವಳು ತನ್ನ ಇದಿರಾಗಿ ಬರುವುದನ್ನು ನೋಡಿ ವೃಕ್ಷಾರೋಹಿಯು “ಶೈಲಿನಿ”! ದಾರಿಗನೊಬ್ಬನು ಇರುಳೆಲ್ಲಾ -

ಶೈಲಿನಿಯು ಕೈಸನ್ನೆ ಮಾಡುವುದನ್ನು ನೋಡಿ ಯುವಕನ ಮಾತು ಮುಂದುವರಿಸಲಿಲ್ಲ. ಅವಳು ಗವಾಕ್ಷದ ಬಳಿಗೆ ಬಂದು ಮುಖವನ್ನು ಹೊರ ಚಾಚಿ “ನೀನು ಇಷ್ಟು ಸಾಹಸವನ್ನು ಏಕೆ ಮಾಡಿದೆ?” ಎಂದು ಕೇಳಿದಳು.

ಯುವಕ:– “ನಿನಗೋಸ್ಕರ.”

ಶೈಲಿನಿ:- “ನನಗೋಸ್ಕರ ನೀನು ಅಪಾಯಕ್ಕೆ ಗುರಿಯಾಗಬೇಕೆಂದು ನಾನು ಬಯಸುವುದಿಲ್ಲ.”

ಯುವಕ:- “ಅಪಾಯಕ್ಕೆ ಈ ಮರಾಟನು ಹೆದರುವನೇ? ನನಗೆ ಅಪಾಯ ಬರುವುದು ಯಾರಿಂದ? ನಿನ್ನ ತಂದೆಯಿಂದಲೇ?”

ಶೈಲಿನಿಯು ಮನಗುಂದಿದವಳಾಗಿ, “ಅಪಾಯವು ಯಾರಿಂದಲಾದರೂ ಬರಬಹುದು. ನಿಶೆಯಲ್ಲಿ ಈ ಎತ್ತರವಾದ ಮರವನ್ನು ನೀನು ಹೇಗೆ ಹತ್ತಿದೆ?”

ಯುವಕ:- “ಕಾಮದೇವನೇ ನನ್ನ ಬೆಂಬಲಕ್ಕೆ ಇದ್ದನು. ಅಂದು ನೀನು ಪ್ರತಾಪಗಡದಲ್ಲಿ ಅರಮನೆಯ ಗೋಡೆಯನ್ನು ಹೇಗೆ ಏರಿ ಬಂದೆ?”

ಶೈಲಿನಿಯು ಒಮ್ಮೆ ಮಾತನಾಡಲಿಲ್ಲ. ಬಳಿಕ “ಅದು ಹೋಗಲಿ, ಈಗ ನೀನು ಬಂದುದು ಅನುಚಿತವಾಯಿತು” ಎಂದಳು.