ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕಾಶಕರ ಮುನ್ನುಡಿ.

ಸಣ್ಣ ಕಥೆಗಳ ಉದ್ಭವ ಮತ್ತು ಪ್ರಚಾರದ ಈ ಯುಗದಲ್ಲಿ, ಈಗ ಮೂವತ್ತು ವರ್ಷಗಳ ಹಿಂದೆ ಪ್ರಚುರವಾದ ಈ ಹಳೆಯ ಕಥೆಗಳನ್ನು ಪ್ರಕಟಟಿಸುವ ಅಗತ್ಯವೇನು? ಎಂಬ ವಿಚಾರವು ಕನ್ನಡಿಗರಲ್ಲಿ ಒರಬಹುದು ಹೊಸ ಗ್ರಂಥಗಳು ತಲೆಯೆತ್ತಿದರೂ ಪಂಪ, ರನ್ನನ ಕವಿತೆಗಳ ಮೇಣ ಅಭಿಮಾನವು ಕುಂದಿಹೋಗಿಲ್ಲ. ನೂತನ ಗ್ರಂಥಗಳ ವಾಚನದ ಅಭಿರುಚಿಯು ಹುಟ್ಟಿದೊಡನೆ, ಹೆಚ್ಚಿದೊಡನೆ, ಹಳೆಯ ಗ್ರಂಥಗಳಲ್ಲಿ ಏನಾದರೂ ಹುರುಳಿದೆಯೇ ಎಂದು ಪರಿಶೋಧನೆ ಮಾಡುವ ಕುತೂಹಲವು ಸಾಮಾನ್ಯವಾಗಿ ಸಾಹಿತಿಗಳಿಗೆ ಬರುತ್ತದೆ. ಹಾಗೆ ಈ ಸಣ್ಣ ಕಥೆಗಳು ವೆಂಕಟಾಚಾರ್ಯರ ಮತ್ತು ಗಳಗನಾಥರ ಕಾದಂಬರಿಗಳನ್ನು - ಉತ್ತಮ ಗ್ರಂಥಗಳನ್ನು - ಮೂಲೆಗೊತ್ತಿ, ಪತ್ರಿಕೆಗಳಲ್ಲಿಯೂ, ಗ್ರಂಥರೂಪವಾಗಿಯೂ ಲೆಕ್ಕವಿಲ್ಲದೆ ಹೊರಡುತ್ತಿರುವಾಗ, ಇಂಥ ಕಥೆಗಳಿಗೆ ಮೂಲ ಪುರುಷನು ಯಾರು? ಎಂಬ ತರ್ಕವು ತನ್ನಂತೆ ಬಂದೇ ಬರುವುದು. ಇಂಥ ವಿಚಾರದಲ್ಲಿ, ಪಶ್ಚಿಮ ಘಟ್ಟಗಳ ಅಡ್ಡಗೋಡೆಯ ಪೂರ್ವಕ್ಕಿರುವ ಕನ್ನಡ ಪ್ರದೇಶಗಳಲ್ಲಿ ಪರಿಶೋಧನೆ ಮಾಡಿದವರು ಇಂಥ ಕಥೆಗಳಿಗೆ ಶ್ರೀಮಾನ್ ಮಾಸ್ತಿ ವೆಂಕಟೇಶ ಐಯ್ಯಂಗಾರರೇ ಮೂಲ ಪುರುಷರ,, ಪಿತೃಸಮಾನರು ಎಂದು ಪರಿಗಣಿಸಿದ್ದಾರೆ. ಶ್ರೀಯುತರ ಮನೋರಂಜಕವಾದ ಕಥೆಗಳ ಮೇಲೆ ನನಗೆ ತುಂಬ ಅಭಿಮಾನವಿದೆ. ಆದರ ಗೌರವಗಳಿವೆ. ಆದರೆ ಅವರು ಇನ್ನೂ ವಿದ್ಯಾರ್ಥಿ ದಶೆಯಲ್ಲಿಯೇ ಇರುವಾಗ ನಮ್ಮ ಜಿಲ್ಲೆಯಲ್ಲಿ ಸಮಾರು ೩೪ ವರ್ಷಗಳ ಹಿಂದೆ ಶ್ರೀಮಾನ್ ಬಿ, ವಿಠ್ಠಲ ರಾವ್ (“ಕಂಠೀರವ ಸಂಪಾದಕ) ಇವರು ಮಾಲಕರಾಗಿಯೂ, ಶ್ರೀಮಾನ್ ಬೆನಗಲ್ ರಾಮರಾವ್, ಎಂ. ಎ., ಎಲ್. ಎಲ್. ಬಿ., ಮದ್ರಾಸ್ ಸರಕಾರದ ನಿವೃತ್ತ) ಟ್ರಾನ್ಸ್ಲೇಟರ್, ಇವರು ಸಂಪಾದಕರಾಗಿಯೂ ಹೊಡುತ್ತಿದ್ದ “ಸುವಾಸಿನಿ” ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಕಥಾ ಸ೦ಗ್ರಹವು, ಪಶ್ಚಿಮ