ಪುಟ:ಕಂಬನಿ-ಗೌರಮ್ಮ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಾಯಿ ಚಳಿಯಿಂದ ನಡುಗುತ್ತಿದ್ದರೂ ಮಗು ಅವಳ ಸೆರಗಿನ ಆಶ್ರಯದಲ್ಲಿ ಸ್ವಸ್ಥವಾಗಿ ಮಲಗಿತ್ತು. ಅತ್ತು ಕೆಂಪಾದ ಕಣ್ಣುಗಳು, ಕೆದರಿದ ಕೂದಲು, ಹರಕು ಸೀರೆ, ಕತ್ತಲಲ್ಲಿ ಒಂದು ಮಗುವಿನೊಡನೆ ಒಬ್ಬಳೇ ಕುಳಿತಿರುವುದನ್ನು ನೋಡಿ ಕೇಳಿದೆ-ಕತ್ತಲಲ್ಲಿ ಅಲ್ಲೇಕೆ ಕುಳಿತಿರುವುದೆಂದು. ಅಯ್ಯೋ ಸೀತಾ, ನೀನಾಗ ನನ್ನೊಡನಿದ್ದಿದ್ದರೆ ಸ್ತ್ರೀಯರ ಆರ್ಥಿಕ ಸ್ವತಂತ್ರತೆಯ ವಿಷಯದಲ್ಲಿ ನಾನು ಮಾತೆತ್ತುವಾಗ ನಗುತ್ತಿರಲಿಲ್ಲ.

ಆ ಅನಾಥ ವಿಧವೆಯನ್ನು ಜಗಳವಾಡಿ ಮಗುವಿನೊಡನೆ ಮಧ್ಯ ರಾತ್ರಿಯಲ್ಲಿ ಅವಳತ್ತೆ ಮನೆಯಿಂದ ಹೊರಡಿಸಿದಳಂತೆ.

ಇದಕ್ಕೇನುವೆ ಸೀತಾ? ಭಾರತ ರಮಣಿಯರಿಗೆ ಆರ್ಥಿಕ ಸ್ವತಂತ್ರತೆ ಇಲ್ಲದೆ ಎಷ್ಟೊಂದು ದುಷ್ಪರಿಣಾಮಗಳಾಗುತ್ತಿರುವವೆಂದು ಈ ಒಂದು ಉದಾಹರಣೆಯಿಂದ ನೀನು ತಿಳಿದುಕೊಂಡರೆ ನಿಜವಾಗಿಯೂ ನನಗೆ ಸಂತೋಷವಾಗುವುದು. ಇನ್ನೇನು ಬರೆಯಲಿ ?

ನಿನ್ನ,
ರಾಮು

ನನ್ನ ಸೀತಾ

ನಿನ್ನ ಕಾಗದ ಕಳೆದ ವಾರವೇ ಬಂದಿತ್ತು. ಆದರೆ ನಾನು ಮಾತ್ರ ಊರಲ್ಲಿರಲಿಲ್ಲ. ಈಗ ತಾನೆ ಬಂದೆ. ಮೇಜಿನ ಮೇಲೆ ಕಾಗದಗಳ ಕಟ್ಟೊಂದು ಇತ್ತು. ನಿನ್ನ ಕಾಗದವು ಬಂದಿರಬಹುದೆಂದು ನನಗೆ ಗೊತ್ತಿತ್ತು. ಬೇಗ ಬೇಗನೆ ಅದನ್ನು ತೆಗೆದು ಓದಿದೆ, ಓದಿದೆ,ಎಷ್ಟು ಓದಿದರ ತೃಪ್ತಿಯಲ್ಲಿ ಸೀತಾ! ಓದುತ್ತಾ ಕುಳಿತರೆ ನಿನಗೆ ಬರೆಯಲು ನಿಧಾನವಾಗುವುದು. ನಾನು ಸಾವಕಾಶ ಮಾಡಿದರೆ ನೀನೂ ಹಾಗೆಯೇ ಮಾಡಿಬಿಡುವೆ. ಆದುದರಿಂದ ನಿನಗೆ ಮೊದಲು ಕಾಗದ ಬರೆದು ನಿನ್ನ ಇನ್ನೊಂದು ಕಾಗದ ಬರುವವರೆಗೂ ಇದನ್ನು ಓದುತ್ತಿರುತ್ತೇನೆ. ಬೇಗ

೬೫

9