ಪುಟ:ಕಂಬನಿ-ಗೌರಮ್ಮ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ಬರೆ. ಈ ಸಾರಿ ವಿಲಂಬವಾಯಿತೆಂದು ಮುಯ್ಯ ತೀರಿಸಿಕೊಳ್ಳುವಯತ್ನ ಮಾಡಬೇಡ. ವಿಲಂಬಕ್ಕೆ ಕಾರಣವು ತಿಳಿದರೆ ಹಾಗೆ ಮಾಡಲಾರೆ.

ನಿನ್ನ ಕಾಗದವು ಬರುವಾಗ ನಾನು ಊರಲ್ಲಿರಲಿಲ್ಲ ಎಂದು ಬರೆದಿದ್ದೇನೆ. ಎಲ್ಲಿಗೆ ಹೋಗಿದ್ದೆ ಗೊತ್ತೇ ? ಗೋವಿಂದ ರಾಯರ ಮನೆಗೆ; ಅವರ ಮೊಮ್ಮಗನ ನಾಮಕರಣಕ್ಕೆ. ಒಂದು ದಿನ ಮುಂದಾಗಿಯೇ ಹೋಗಿದ್ದೆ; ಆವರ ಒತ್ತಾಯ ತಡೆಯಲಾರದೆ. ಅಪರೂಪದ ಮಗು- ಮನೆಯವರ ಆದರದ ಬೊಂಬೆ. ಬಹಳ ಸಂಭ್ರಮದಿಂದ ನಾಮಕರಣದ ಸಿದ್ಧತೆಗೆ ಆರಂಭವಾಯ್ತು.

ಸೊಸೆ ಬಾಣಂತಿತನಕ್ಕೆ ಹೋದವಳು ಹಿಂದಿರುಗಿ ಬಂದಿರಲಿಲ್ಲ. ಮಗ ಕರೆತರಲು ಹೋಗಿದ್ದ. ನಾನು ಹೋಗಿ ಸ್ವಲ್ಪ ಹೊತ್ತಾಗಿತ್ತು. ಬಂದಿದ್ದವರೊಡನೆ ಹರಟೆ ಹೊಡೆಯುತ್ತಾ ಜಗುಲಿಯ ಮೇಲೆ ಕುಳಿತಿದ್ದೆ. ಅಷ್ಟರಲ್ಲಿ ಅವರ ಮಗ ಹೆಂಡತಿಯನ್ನೂ ಮಗುವನ್ನೂ ಕರೆದುಕೊಂಡು ಬಂದ. ಆಗ ಬೆಳನ ಹತ್ತುಗಂಟೆಯಾಗಿತ್ತು. ಗೋವಿಂದರಾಯರ ಹೆಂಡತಿ ಅವರನ್ನು ಇದಿರುಗೊಂಡು ಮಗುವನ್ನು ಎತ್ತಿ ಮುದ್ದಿಟ್ಟು ದೃಷ್ಟಿಯಾಗದಂತೆ ಮೊಮ್ಮಗನಿಗೆ ಮಸಿಬೊಟ್ಟಿಟ್ಟರು. ಸೊಸೆಗೆ ಕುಂಕುಮವಿಟ್ಟು ಕೈಹಿಡಿದು ಒಳಗೆ ಕರೆದುಕೊಂಡು ಹೋದರು.

ಎಲ್ಲರಿಗೂ ಸಂತೋಷ-ಸಂಭ್ರಮ-ಹಿಗ್ಗೇಹಿಗ್ಗು. ಅಪರೂಪದ ಮಗು. ಸಾಲದುದಕ್ಕೆ ಮುಟ್ಟಿನ ಚಂಡಿನಂತಹ ಗಂಡು. (ನಗಬೇಡ ) ಕೇಳಬೇಕೆ-ಆನಂದದ ಸುರಿಮಳೆ!

ಸೊಸೆ ಒಳಗೆ ಹೋದಳು. ಹಿತ್ತಲಿಜಗುಲಿಯಲ್ಲಿ ಹಾಸಿದ ಚಾಪೆಯ ಮೇಲೆ ಅತ್ತೆ, ಸೊಸೆಯನ್ನು ಕೂಡಿಸಿ ಮೊಮ್ಮಗನಿಗೆ ಕುಡಿಸಲು ಹಾಲು ತಂದಿಟ್ಟರು. ಆಕೆ ಹಾಲು ಕುಡಿಸತೊಡಗಿದಳು. ಇನ್ನೇನು-ಎರಡೇ ಎರಡು ಚಮಚ ಹಾಲು ಉಳಿದಿತ್ತು .ಅಷ್ಟರಲ್ಲಿ 'ಢಂ' ಎಂದು ಶಬ್ದವಾಯಿತು. ಹಾಲು ಕುಡಿಸುತ್ತಾ ಕೂತಿದ್ದ ತಾಯಿ ಕೆಳಗುರುಳಿದಳು. ಮಗು ನೆಲಕ್ಕೆ ಬಿದ್ದು ಚೀರತೊಡಗಿತು. ಎಲ್ಲರೂ ಓಡಿಹೋಗಿ ನೋಡಿದೆವು. ಅಜ್ಜಿ ಮಗುವನ್ನೆತ್ತಿಕೊಂಡರು. ಮಗ ಹೆಂಡತಿಯನ್ನು ಎತ್ತಿದ.