ಪುಟ:ಕಂಬನಿ-ಗೌರಮ್ಮ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವನಿಗೆ ಪ್ರಾಣಸಂಕಟ. ಮೂರ್ತಿಯ ಸೂಟುಗಳನ್ನೂ ಶೂಗಳನ್ನೂ ನೋಡುವಾಗ ಹಣ ಕಳೆಯುವ ದುರ್ವ್ಯಸನವೆಂದು ಕಿಡಿಕಿಡಿಯಾಗುತ್ತಿದ್ದನು. ಮಗನ ಮೇಲೆ ಕೋಪ ಬಂದಾಗ ಹೆಂಡತಿಗೆ ಹೊಡೆಯುವುದು ಅವನ ಪದ್ಧತಿ. ತಾಯಿಗೆ ಕೊಡುವ ಕ್ರೂರ ಶಿಕ್ಷೆಯನ್ನು ನೋಡಿಲಾರದೆ ಮೂರ್ತಿ ತಂದೆಯೊಡನೆ ಹಣ ಕೇಳುವುದನ್ನೇ ಬಿಟ್ಟುಬಿಟ್ಟಿದ್ದನು. ತಂದೆಯೇ ಪ್ರತಿ ತಿಂಗಳ ಮೊದಲನೆಯ ತಾರೀಖಿನಲ್ಲಿ 'ಹಣ ಖರ್ಚು ಮಾಡುವುದು ಪಾಪ' ಎಂದು ಒಂದೂವರೆ ಗಜ ಕಾಗದ ಬರೆದ ಹದಿನೈದು ರೂಪಾಯಿಗಳನ್ನು ಕಳುಹಿಸುತ್ತಿದ್ದನು. ಮತ್ತೊಂದು ತಿಂಗಳ ಮೊದಲನೆಯ ತಾರೀಖಿನವರೆಗೂ ಆ ಹದಿನೈದು ರೂಪಾಯಿಗಳಲ್ಲಿ ಮೂರ್ತಿ ದಿನ ಕಳೆಯಬೇಕಿತ್ತು. ಮೂವತ್ತನೆಯ ತಾರೀಖಿನ ದಿನ ಮೂರ್ತಿ ಪ್ರತಿಯೊಂದು ಕಾಸಿನ ಲೆಕ್ಕವನ್ನು ಬರೆದು ತಂದೆಗೆ ಕಳುಹಿಸಬೇಕು. ಅವನು ಖರ್ಚು ಮಾಡಿದ್ದು ಸರಿ ಎಂದು ತೋರಿದರೆ ಮರುದಿನ ತಂದೆ ಹಣ ಕಳುಹಿಸುತ್ತಿದ್ದನು. ಇದಲ್ಲದೆ ಮೂರ್ತಿ ಪ್ರತಿವರ್ಷ ಪ್ರತಿ ಕ್ಲಾಸಿನಲ್ಲಿಯೂ ಮೊದಲನೆಯವನಾಗಿರಬೇಕೆಂದು ತಂದೆಯ ಇಚ್ಛೆ, ಹಿಂದಿನ ವರ್ಷ ಮೂರ್ತಿ ಸೆಕೆಂಡ್ ಕ್ಲಾಸಿನಲ್ಲಿ ಬಂದುದಕ್ಕಾಗಿ ಒಂದು ತಿಂಗಳು ಅವನೊಡನೆ ಮಾತಾಡಿರಲಿಲ್ಲ. ತಾಯಿಯ ಅತ್ಯಧಿಕ ಸ್ನೇಹವೇ ಇದಕ್ಕೆ ಕಾರಣವೆಂದು ಅವಳಿಗೂ ಬೇಕಾದಷ್ಟು ಎಟುಗಳು ಬಿದ್ದಿದ್ದವು.

ತಾಯಿಯ ಅಸಹನೀಯ ವೇದನೆಯನ್ನು ನೋಡಲಾರದೆ ಮೂರ್ತಿ ಹೇಗಾದರೂ ಮಾಡಿ ಈ ವರ್ಷ ಮೊದಲನೆಯವನಾಗಬೇಕೆಂದು ಹಗಲು ರಾತ್ರಿ ಓದುತ್ತಿದ್ದನು. ತಂದೆಯ ಈ ತರದ ಕಠೋರ ವ್ಯವಹಾರದಿಂದ ತಾಯಿ ಮಕ್ಕಳ ಪ್ರೇಮವು ದಿನದಿನಕ್ಕೆ ದೃಢವಾಗುತ್ತಿತ್ತು.

ಮೂರ್ತಿ ಊರಿಗೆ ಬಂದ ದಿನವೇ ಅವನ ತಂದೆ ಏನೋ ಕೆಲಸದ ಸಲುವಾಗಿ ಒಂದುವಾರ ಬೆಂಗಳೂರಿಗೆ ಹೋಗಬೇಕಾಯಿತು. ಆ ದಿನ ಅವನ ತಾಯಿ ಬೇಗ ಬೇಗನೆ ಕೆಲಸಗಳನ್ನೆಲ್ಲಾ ತೀರಿಸಿ ಮಗನೊಡನೆ ಮಾತಾಡುತ್ತಾ ಮನೆಯ ಮುಂದಿನ ಜಗುಲಿಯ ಮೇಲೆ ಕೂತಿದ್ದಳು.

೬೯