ಪುಟ:ಕಂಬನಿ-ಗೌರಮ್ಮ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ನೆರೆಮನೆಗಳ ಪುಟ್ಟ ಪುಟ್ಟ ಹುಡುಗಿಯರು ಒಳೊಳ್ಳೆಯ ಸೀರೆಗಳನ್ನುಟ್ಟುಕೊಂಡು ನಗುನಗುತ್ತಾ ನವರಾತ್ರಿಯ ಬೊಂಬೆಗಳನ್ನು ನೋಡುವ ಕುತೂಹಲದಿಂದ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ಎಳೆ ಪ್ರಾಯದ ಮಕ್ಕಳ ಆ ಆನಂದದ ನಲಿದಾಟವನ್ನು ನೋಡುತ್ತ ತಾಯಿ ಮಗ ಇಬ್ಬರೂ ಮಾತುಗಳನ್ನು ಮರೆತು ಮೂಕರಂತೆ ಕೂತಿದ್ದರು. ಮೂರ್ತಿಯ ತಾಯಿಗೆ ಮಕ್ಕಳೆಂದರೆ ಬಹಳ ಪ್ರೀತಿ. ರಸ್ತೆಯಲ್ಲಿ ಓಡಾಡುತ್ತಿದ್ದ ಮಕ್ಕಳಲ್ಲಿ ಒಂದು ಮಗು (ಸುಮಾರು ನಾಲ್ಕು ವರ್ಷ ಪ್ರಾಯದ್ದು) ಬಹಳ ಮುದ್ದಾಗಿತ್ತು. ಆ ಮಗುವಿಗೊಂದು ಪುಟ್ಟ ಸೀರೆ ಉಡಿಸಿದ್ದರು. ಅದೇ ಮೊದಲನೆಯ ಸಾರಿ ಅದು ಸೀರೆ ಉಟ್ಟುದಾಗಿರಬೇಕೆಂದು ತೋರುತ್ತದೆ. ಅದರ ಆನಂದವು ಮೇರೆ ಮೀರಿತ್ತು. ಗಾಳಿಗೆ ಹಾರಾಡುತ್ತಿದ್ದ ಅದರ ಗುಂಗುರು ಕೂದಲುಗಳೂ ಉದ್ದವಾದ ರೆಪ್ಪೆಗಳ ನಡುವಿನ ಕರಿತುಂಬಿಗಳಂತಹ ವಿಶಾಲವಾದ ಕಣ್ಣುಗಳೂ ಕೆಂಪುತುಟಿಗಳಿಂದ ಒಪ್ಪುವ ಬಾಯಿಯೂ ನಗೆಯನ್ನು ಹೊರಚೆಲ್ಲುತ್ತಿದ್ದವು. ಏನೋ ಒಂದು ಪದವನ್ನು ಹೇಳುತ್ತ ಕಂಕುಳಲ್ಲೊಂದು ಬೊಂಬೆಯನ್ನು ಎತ್ತಿಕೊಂಡು ಆ ಮಗು ಸಂತೋಷವನ್ನು ಬೀರುತ್ತ ರಸ್ತೆಯಲ್ಲಿ ಬರುವುದನ್ನು ನೋಡಿ ಮೂರ್ತಿಯ ತಾಯಿ 'ಬಾಮ್ಮ ಪ್ರಭಾ' ಎಂದರು. ಆಕೆಯ ಮಾತು ಕೇಳಿ ಪ್ರಭಾ ಓಡೋಡುತ್ತ ಬಂದು 'ಆ ಬೊಂಬೆ ನೋದಿಲ್ಲಿ' ಎಂದು ತನ್ನ ಬೊಂಬೆಯನ್ನು ತೋರಿಸತೊಡಗಿದಳು. ಮೂರ್ತಿಯ ತಾಯಿ ಆ ಮುದ್ದಿನ ರಾಶಿಯನ್ನು ಎತ್ತಿಕೊಂಡು ಅವಳ ಕೆನ್ನೆಗಳಿಗೆ ಮುತ್ತುಕೊಟ್ಟು 'ನೋಡು ಮೂರ್ತಿ ಬಂದಿದ್ದಾನೆ, ಮಾತಾಡು' ಎಂದು ಹೇಳಿ ಅವಳಿಗೆ ಕೊಡುವುದಕ್ಕೆ ತಿಂಡಿ ತರುವುದಕ್ಕಾಗಿ ಒಳಕ್ಕೆ ಹೋದರು. ನನ್ನ ಬೊಂಬೆ ನೋಡು ಮೂತಿ' ಎಂದು ಸುರುಮಾಡಿದಳು ಪ್ರಭೆ ಮೂರ್ತಿಯೊಡನೆ ಮಾತಿಗೆ ಚಿಕ್ಕಂದಿನಿಂದಲೂ ಅವನಿಗೆ ಪರಿಚಯವಿತ್ತು ಪ್ರಭೆಯದು. ನೆರೆಮನೆಯ ನಾರಾಯಣರಾಯರ ಮಗಳು ಅವಳು. ನಲಿಸಿ ಸಣ್ಣ ಪ್ರಭೆಯನ್ನು ಎತ್ತಿಕೊಂಡು ಅವನ ತಾಯಿಯೊಡನೆ ಹಿತ್ತಲು ಬೇಲಿಯ ಹತ್ತಿರ ನಿಂತುಕೊಂಡು ಮಾತಾಡುತ್ತಿದ್ದಾಗ ಎಷ್ಟೋ ಸಾರಿ