ಪುಟ:ಕಂಬನಿ-ಗೌರಮ್ಮ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೋದ ಮೇಲಂತೂ 'ನಲಿನಿ' ಎಂಬ ವ್ಯಕ್ತಿ ಈ ಲೋಕದಲ್ಲಿದೆ ಎಂಬುದನ್ನೇ ಅವನು ಮರೆತುಬಿಟ್ಟಿದ್ದ. ಈಗವಳ ಜಡೆ ನೋಡಿದೊಡನೆ ಅವನಿಗೆ ಹಿಂದಿನ ದಿನಗಳ ಚಿಕ್ಕ ನಲಿನಿಯ ಸ್ಮರಣೆಯಾಯಿತು. ಅವಳಿಗೆ ಹೂಗಳ ಮೇಲಿದ್ದ ಪ್ರೇಮ ನೆನಪಾಯ್ತು. ನಾಲ್ಕು ಹೂ ಕೊಯಿದುಕೊಟ್ಟರೆ ತಪ್ಪೇನು ಎಂದುಕೊಂಡು ತುಂಬ ಹೂಗಳಿದ್ದ ಒಂದು ಸಣ್ಣ ಕೊಂಬೆಯನ್ನು ಮುರಿದು ಅವಳು ಕೂತಿದ್ದ ಕಡೆಗೆ ಎಸೆದನು. ಸದ್ದು ಕೇಳಿ ಅವಳು ತಿರುಗಿ ನೋಡಿದಳು. ಮೂರ್ತಿ ಅವಳ ಮುಖ ನೋಡಿದೆ ಅಂದು ತನ್ನೊಡನೆ ಮರಹತ್ತಿ, ಬೇಲಿ ಮುರಿದು ಕಲ್ಲೆಸೆದು ಓಡಾಡುತಿದ್ದ ನಳಿನಿಯ ನಗು ಮುಖದ ಬದಲು, ಹೇಳಲಾರದಂತಹ ಯಾವುದೋ ಒಂದುತರದ ಸಹನಾತೀತ ವೇದನೆಯನ್ನು ಮುಚ್ಚಲಾಗದಿದ್ದರೂ ಮುಚ್ಚಲು ಯತ್ನಿಸುವ ಮುಖದ ಸಲಿಸಿಯನ್ನು ನೋಡಿ ಕೋಮಲ ಪ್ರಕೃತಿಯ ಮೂರ್ತಿ 'ಅಯ್ಯೋ' ಅಂದುಕೊಂಡ. ನಲಿನಿ ಬಿದ್ದಿದ್ದ ಹೂಗಳನ್ನು ನೋಡಿದಳು. ಮರದ ಮೇಲಿದ್ದ ಮೂರ್ತಿ ಅವಳಿಗೆ ಕಾಣಿಸಲಿಲ್ಲ. ಗಾಳಿಗೆ ಬಿದ್ದಿರಬಹುದೆಂದು ಯೋಚಿಸಿ ಕೈಗಳನ್ನು ತೊಳೆದುಕೊಂಡು ಹೂಗಳನ್ನು ತೆಗೆದುಕೊಂಡಳು.

ಹೂವನ್ನು ಕೈಗೆ ತೆಗೆದುಕೊಳ್ಳುವಾಗ ಮುಚ್ಚಿದ್ದ ಮೋಡಗಳ ನಡುವಿನಿಂದ ಒಂದು ನಿಮಿಷ ಇಣಿಕಿನೋಡಿದ ಬಿಸಿಲಿನಂತೆ ಅವಳ ಮುಖದಲ್ಲಿ ಎಳೆನಗೆಯೊಂದು ಮೂಡಿ ಮಾಯವಾಯಿತು. ಬೇಕಾದ್ದಕಿಂತಲೂ ಹೆಚ್ಚಿನ ಬಹುಮಾನ ಆ ನಗುವೊಂದರಲ್ಲೇ ದೊರೆಯಿತೆಂದುಕೊಂಡು ಮೂರ್ತಿ ಅವಳಿಗೆ ಗೊತ್ತಾಗದಂತೆ ಮರವಿಳಿದು ತಾಯಿಯನ್ನು ಹುಡುಕುತ್ತ ಒಳಗೆ ಹೋದ.

ಪ್ರಭೆ ಸುಂದರಿ ಎಂಬುದರಲ್ಲಿ ಸಂದೇಹವಿಲ್ಲ. ಬೆಳಗಿನ ಹೊತ್ತು ಸೂರ್ಯನುದಯಿಸುವುದನ್ನು ಇದಿರು ನೋಡುತ್ತ ಅರಳಲನುವಾದ ಕಮಲದಂತೆ ಅವಳ ಮುಖ. ನಲಿನಿ ಪ್ರಭೆಯಂತೆ ಸುಂದರಿಯಲ್ಲ. ಆದರೆ

೭೨

10