ಪುಟ:ಕಂಬನಿ-ಗೌರಮ್ಮ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ಪೂರೈಸಿದ್ದವು. ನಲಿನಿಯನ್ನು ನೋಡುವುದು ಮಾತ್ರ ಬಾಕಿ ಇತ್ತು. ಆದರವಳನ್ನು ನೋಡುವುದು ಹೇಗೆ ? ಅವಳು ಪಾತ್ರೆ ಬೆಳಗುವುದಕ್ಕೆ ಕೊಳದ ಹತ್ತಿರ ಬರುವ ಮೊದಲೇ ಬಸ್ಸು ಹೊರಟು ಹೋಗುತ್ತಿತ್ತು.

ಅವಳನ್ನು ನೋಡುವುದಕ್ಕೆಂದೇ ಅವರ ಮನೆಗೆ ಹೋಗುವುದು ಅಸಾಧ್ಯದ ಕೆಲಸ. ಪ್ರಭೆಯು ನೆವನದಿಂದ ಹೋಗುವದೆಂದರೆ ಅವಳು ಬೆಳಗಿನಿಂದಲೂ ಇವನ ಮನೆಯಲ್ಲೇ ಇದ್ದಾಳೆ. ನಲಿನಿಯನ್ನು ನೋಡುವುದು ಸಾಧ್ಯವಿಲ್ಲ ಎಂದು ನಿಟ್ಟುಸಿರುಬಿಟ್ಟು ತಂದೆ-ತಾಯಿಯವರಿಗೆ ನಮಸ್ಕರಿಸಿ ಮನೆಯ ಬಾಗಿಲಲ್ಲಿ ಬಂದು ನಿಂತ ಬಸ್ಸನ್ನು ಹತ್ತಿದ. ಮಗನನ್ನು ಕಳುಹಿಸುವಾಗ ತಾಯಿಗೆ ಬೇಸರವಾದರೂ ಮಗನ ಮುಖವನ್ನು ನಗುನಗುತ್ತಾ ನೋಡಿ 'ದೇವರೇ, ನನ್ನ ಮಗುವನ್ನು ರಕ್ಷಿಸುವ ಭಾರ ನಿನ್ನದು' ಎಂದು ಮನಸ್ಸಿನಲ್ಲಿ ಬೇಡಿಕೊಂಡಳು.

ಬೆಂಗಳೂರು ತಲುಪಿ ಎರಡು ವಾರಗಳಾದ ತರುವಾಯು ಮೂರ್ತಿ ನಲಿನಿಯ ವಿಷಯವಾಗಿ ತಾಯಿಗೊಂದು ಕಾಗದ ಬರೆದ. ನಲಿನಿಯನ್ನು ತಾನು ಮದುವೆಯಾಗಬೇಕೆಂಬ ಬಯಕೆಯನ್ನು ಸೂಚಿಸಿ ಅವಳ ವಿಷಯವಾಗಿ ತನಗೆ ಬರೆಸಬೇಕೆಂದು ಬೇಡಿಕೊಂಡಿದ್ದ. ತಾಯಿಗೆ ಮಗನ ಮದುವೆ, ಅದರಲ್ಲೂ ನಲಿನಿ ಸೊಸೆಯಾಗುವಾಕೆ ಎಂದು ತಿಳಿದು ಸಂತೋಷವೇ ಆದರೂ ತನ್ನ ಗಂಡನು ಈ ಮದುವೆಯಾಗದಂತೆ ಮಾಡುವನೆಂದು ಅವಳಿಗೆ ಗೊತ್ತಿದ್ದುದರಿಂದ, ಮೂರ್ತಿಯ ಕಾಗದ ಓದಿ ಅವಳಿಗೆ ಸಂತೋಷಕ್ಕಿಂತ ಹೆಚ್ಚಾಗಿ ವ್ಯಸನವೇ ಉಂಟಾಯಿತು.

ನಲಿನಿಯ ಅಪರಾಧವಲ್ಲದಿದ್ದರೂ ಅವಳನ್ನು ತಿರಸ್ಕರಿಸುವುದಕ್ಕೆ ಮೂರ್ತಿಯ ತಂದೆಗಿದ್ದ ಕಾರಣವು ಬಹಳ ಬಲವಾದುದೇ ಆಗಿತ್ತು. ಅವಳ ತಾಯಿಯ ಆತ್ಮಹತ್ಯಕ್ಕೆ ಜನರಿಗೆ ಗೊತ್ತಿಲ್ಲದಿರೂ ತಾನೇ ಕಾರಣನೆಂದು ಅವನ ಮನಸ್ಸಿಗೆ ಗೊತ್ತಿತ್ತು. ಮೂರ್ತಿಗಾಗಲೀ ಅವನ ತಾಯಿಗಾಗಲೀ ಈ ವಿಷಯ ತಿಳೆಯದು. ಆದರೂ ಇಬ್ಬರಿಗೂ ಗೊತ್ತು, ನಲಿನಿಯನ್ನು ಸೊಸೆಮಾಡಿಕೊಳ್ಳುವುದಕ್ಕೆ ಅವನು ವಿರೋಧಿಸುವನೆಂದು.