ಪುಟ:ಕಂಬನಿ-ಗೌರಮ್ಮ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಗನಿಗೆ ಬರೆಯುವಾಗ ತಾಯಿ ನಲಿನಿಯ ವಿಷಯವೆಲ್ಲವನ್ನೂ ಬರೆಯುವಳು. ಅವಳು ಸೊಸೆಯಾದರೆ ತನ್ನ ಸಂತೋಷಕ್ಕೆ ಮಿತಿಯಿರಲಾರದು ಎಂದುಕೊಳ್ಳುವಳು. ಗಂಡನನ್ನು ಯೋಚಿಸುವಾಗ ಮಾತ್ರ ಅವಳ ಆಸೆ ಎಲ್ಲಾ ನಿರಾಶೆಯಾಗುವುದು.

ದಿನಗಳೊಂದೊಂದಾಗಿ ಕಳೆದವು. ಮೂರ್ತಿ ಮಾತ್ರ ನಿರಾಶೆಗೆಡೆಗೊಡದೆ ಉತ್ಸಾಹದಿಂದ ಆನಂದದಿಂದ ಓದತೊಡಗಿದ; ಓದಿ ಪಾಸಾಗಿ ಕೆಲಸ ಸಂಪಾದಿಸಿ ತಾಯಿಯನ್ನು ತಂದೆಯ ಕ್ರೂರತನದಿಂದ ಪಾರು ಮಾಡುವುದಕ್ಕಾಗಿ-ನಲಿನಿಯನ್ನು ಮದುವೆಯಾಗುವುದಕ್ಕಾಗಿ.

ಕೊನೆಗೆ ಪರೀಕ್ಷೆಯು ದಿನವೂ ಬಂತು. ಚೆನ್ನಾಗಿ ಓದಿದ್ದ ಮೂರ್ತಿಗೆ ಕಷ್ಟವಾಗಲಿಲ್ಲ. ಚೆನ್ನಾಗಿಯೇ ಮಾಡಿದ ಪರೀಕ್ಷೆ ಮುಗಿದು ರಜ ಸಿಕ್ಕುವುದೇ ತಡ-ಹೊರಟು ಬಿಟ್ಟ ಊರಿಗೆ. ಎಂದಿನಂತೆ ತಾಯಿಯನ್ನು ಮಾತ್ರ ನೋಡುವ ಉತ್ಸಾಹದಿಂದಲ್ಲ-ನಲಿನಿಯನ್ನೂ ಕಾಣಬಹುದೆಂಬ ಆತುರದಿಂದ.

ತಂದೆಗೆ ಮಗ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿರುವನೆಂದು ಸ್ವಲ್ಪ ಸಮಧಾನವಾಗಿತ್ತು, ಅವನ ದುರುಗುಟ್ಟುವ ಕಣ್ಣುಗಳಲ್ಲಿ ಮೂರ್ತಿಯನ್ನು ನೋಡುವಾಗ ಮಳೆಗಾಲದ ಬಿಸಿಲಿನಂತೆ ಪ್ರೇಮದ ಸುಳಿಯೆಂದು ಸುಳಿದು ಮಾಯವಾಗುತ್ತಿತ್ತು. ಅವನ ತಾಯದ ಮೇಲೂ ಕೋಪ ಕಡಿಮೆಯಾಗಿತ್ತು. ತಂದೆಯ ಮನಸ್ಸು ಸಮಾಧಾನ, ಶಾಂತತೆ ತಾಳಿರುವುದನ್ನು ನೋಡಿ ಮೂರ್ತಿ ನಲಿನಿಯ ಸುದ್ದಿ ಎತ್ತಲು ಸಮಯವನ್ನು ಕಾಯುತ್ತಿದ್ದ.

ಮೂರ್ತಿ ಊರಿಗೆ ಬಂದು ನಾಲ್ಕು ದಿನಗಳಾಗಿದ್ದವು. ಆ ದಿನ ಮಧ್ಯಾಹ್ನ ಊಟಮಾಡಿ ಕೈತೊಳೆಯುವುದಕ್ಕೆ ಬಚ್ಚಲಮನೆಗೆ ಹೋಗಿ ಹಿಂತಿರುಗುತ್ತಿದ್ದ. ಅಂಗಳವನ್ನು ದಾಟಿಕೊಂಡು ಹೋಗಬೇಕು ಬಚ್ಚಲಿಗೆ. ಅಂಗಳಕ್ಕೆ ಬರುವಾಗ ಬೇಲಿಯ ಹತ್ತಿರ ನಿಂತು ಪ್ರಭೆ 'ಮೂತೀ' ಎಂದಳು. ಮೂರ್ತಿ ಹತ್ತಿರಹೋಗಿ ಪ್ರಭೆಯನ್ನು ಎತ್ತಿ ಬೇಲಿ ದಾಟಿಸಿದ. ಅವಳೂ ಊಟಮಾಡಿ ಬಂದವಳು. ಕೈ ತೊಳೆದೇ ಇರಲಿಲ್ಲ.

೭೭